ಹಳದಿ-ಕೆಂಪು ಮಿಶ್ರಿತ ಕನ್ನಡ ಬಾವುಟ ಬದಲಾಯಿಸುವ ಪಿತೂರಿ: ವಾಟಾಳ್ ನಾಗರಾಜ್ ಆರೋಪ
ಬೆಂಗಳೂರು ಆ.12: ರಾಜ್ಯ ಸರಕಾರದ ಮೂಲಕ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕನ್ನಡ ಬಾವುಟದ ವಿನ್ಯಾಸ ಹೇಗಿರಬೇಕು ಎಂಬುದರ ಕುರಿತು ಸಮಿತಿ ರಚಿಸುವ ನೆಪದಲ್ಲಿ ಈಗಿರುವ ಹಳದಿ-ಕೆಂಪು ಬಣ್ಣದ ಬಾವುಟವನ್ನು ಬದಲಾಯಿಸುವ ಪಿತೂರಿ ನಡೆಸಲಾಗುತ್ತಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ಕನ್ನಡ ಒಕ್ಕೂಟ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕನ್ನಡ ಬಾವುಟ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಕನ್ನಡ ವಿರೋಧಿ ಶಕ್ತಿಗಳು ಸರಕಾರದ ಮೂಲಕ ಹಳದಿ-ಕೆಂಪು ಮಿಶ್ರಿತ ಕನ್ನಡ ಬಾವುಟವನ್ನು ಕೆಳಗಿಳಿಸಲು ಹವಣಿಸುತ್ತಿವೆ. ಈ ಬಗ್ಗೆ ಕನ್ನಡ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಬಾವುಟ ರೂಪಿತವಾಗಿರುವುದರ ಕುರಿತು ರಾಜಕಾರಣಿಗಳಿಗೆ ಹಾಗೂ ಇವತ್ತಿನ ಸಾಹಿತಿಗಳಿಗೆ ಗೊತ್ತಿಲ್ಲ. ಸುಮಾರು 50ವರ್ಷಗಳ ಹಿಂದೆ ನಾನು ಹಾಗೂ ಹಿರಿಯ ಕನ್ನಡ ಹೋರಾಟಗಾರರಾಗಿದ್ದ ಮಾ.ರಾಮಮೂರ್ತಿ ನೇತೃತ್ವದಲ್ಲಿ ಕನ್ನಡ ಬಾವುಟ ಕುರಿತು ಎರಡು ಸಭೆಗಳನ್ನು ನಡೆಸಲಾಗಿತ್ತು. ಅದರಲ್ಲಿ ಹಳದಿ-ಕೆಂಪು ಮಿಶ್ರಿತ ಬಾವುಟವನ್ನು ಅಂತಿಮಗೊಳಿಸಲಾಗಿತ್ತು. ಈ ಬಾವುಟವನ್ನು ಇಡೀ ಕನ್ನಡದ ಜನತೆ ಅಭಿಮಾನದಿಂದ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಹೋರಾಟದ ಎಚ್ಚರಿಕೆ: ಕಳೆದ 50ವರ್ಷಗಳಿಂದ ನಮ್ಮ ಅಸ್ಮಿತೆಯ ಭಾಗವಾಗಿರುವ ಹಳದಿ-ಕೆಂಪು ಮಿಶ್ರಿತ ಬಾವುಟದ ವಿನ್ಯಾಸದಲ್ಲಾಗಲಿ, ಬಣ್ಣದಲ್ಲಾಗಲಿ ಕೊಂಚ ವ್ಯತ್ಯಾಸವಾದರು ಸರಕಾರ ಹಾಗೂ ಕನ್ನಡ ಬಾವುಟ ವಿರೋಧಿಗಳ ವಿರುದ್ಧ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ. ಕನ್ನಡ ಬಾವುಟ ನಮ್ಮ ಭಾವನಾತ್ಮಕ ವಿಷಯವಾಗಿದ್ದು, ಅದರಲ್ಲಿ ಮೂಗು ತೂರಿಸಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಕನ್ನಡ ನಾಡು-ನುಡಿ ಉಳಿಯಬೇಕಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಪರ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಈ ಬಗ್ಗೆ ಈಗಿನಿಂದಲೇ ಸಾರ್ವಜನಿಕ ಚರ್ಚೆಯಾಗಲಿ. ಕನ್ನಡದ ಬಗ್ಗೆ ಅಪಾರ ಆಸಕ್ತಿಯಿರುವ ಕನಿಷ್ಠ 10ಮಂದಿ ಆಯ್ಕೆ ಮಾಡುವುದು ಜನತೆಯ ಜವಾಬ್ದಾರಿ ಎಂದು ಅವರು ಹೇಳಿದರು.
ಸಮ್ಮೇಳನದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ್, ಕನ್ನಡ ಪರ ಹೋರಾಟಗಾರ ಎಚ್.ವಿ.ಗಿರೀಶ್, ಟಿ.ಪಿ.ಪ್ರಸನ್ನಕುಮಾರ್, ಜಿ.ಮುದ್ದೇಗೌಡ ಸೇರಿ ಹಲವು ಪ್ರಮುಖರು ಭಾಗವಹಿಸಿದ್ದರು.
ಹಳದಿ-ಕೆಂಪು ಮಿಶ್ರಿತ ಕನ್ನಡ ಬಾವುಟದಲ್ಲಿ ಯಾವುದೇ ವ್ಯತ್ಯಾಸ ಮಾಡಬಾರದು ಎಂದು ಒತ್ತಾಯಿಸಿ ಹಾಗೂ ಕನ್ನಡ ಬಾವುಟದ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೆ.10ರಂದು ಕೆ.ಆರ್.ಮಾರುಕಟ್ಟೆಯಿಂದ ಪುರಭವನದ ಮುಂಭಾಗದವರೆಗೆ ಕನ್ನಡ ಬಾವುಟದ ಮೆರವಣಿಗೆ ನಡೆಸಲಾಗುವುದು.
-ವಾಟಾಳ್ ನಾಗರಾಜ್ ,ಅಧ್ಯಕ್ಷ, ಕನ್ನಡ ಒಕ್ಕೂಟ