ಶ್ರೀಲಂಕಾ ವಿರುದ್ಧ ಏಕದಿನ ಸರಣಿ: ಇಂದು ಟೀಮ್ ಇಂಡಿಯಾ ಆಯ್ಕೆ

Update: 2017-08-12 18:45 GMT

ಹೊಸದಿಲ್ಲಿ, ಆ.12: ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಎಂಎಸ್‌ಕೆ ಪ್ರಸಾದ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ರವಿವಾರ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದೆ.

ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ, ಹಿರಿಯ ಬ್ಯಾಟ್ಸ್‌ಮನ್‌ಗಳಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ತಂಡಕ್ಕೆ ವಾಪಸಾಗುವ ನಿರೀಕ್ಷೆಯಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್ ಗಳಿಸಿರುವ ಶಿಖರ್ ಧವನ್ ಹಾಗೂ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿರುವ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮ ಮತ್ತೊಮ್ಮೆ ತಂಡಕ್ಕೆ ವಾಪಸಾಗುವುದು ಖಚಿತ. ರಾಹುಲ್ ಸಂಪೂರ್ಣ ಫಿಟ್ ಆಗಿರುವ ಹೊರತಾಗಿಯೂ ಆಯ್ಕೆಗಾರರನ್ನು ಅವರಿಗೆ ವಿಶ್ರಾಂತಿ ನೀಡುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.

 ವೆಸ್ಟ್‌ಇಂಡೀಸ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿರುವ ಅಜಿಂಕ್ಯ ರಹಾನೆ ಹಾಗೂ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ ಅವಕಾಶ ಪಡೆಯಬಹುದು. ಆದರೆ ಆಯ್ಕೆಗಾರರು ಯುವರಾಜ್ ಮೇಲೆ ವಿಶ್ವಾಸವಿರಿಸಿದರೆ ಇಬ್ಬರೂ ಆಟಗಾರರು ತಂಡದಿಂದ ಹೊರಗುಳಿಯಬೇಕಾಗುತ್ತದೆ.

ಯುವರಾಜ್‌ಗೆ ಅವಕಾಶ ನೀಡುವ ಕುರಿತು ಟೀಕೆ ಕೇಳಿಬರುತ್ತಿದೆ. ನಾಯಕ ಕೊಹ್ಲಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಯುವಿ ಕಳೆದ 7 ಪಂದ್ಯಗಳಲ್ಲಿ ಕೇವಲ 162 ರನ್ ಗಳಿಸಿದ್ದಾರೆ. ಫೀಲ್ಡಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

 ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದ ಪಾಂಡೆ ದಕ್ಷಿಣ ಆಫ್ರಿಕದಲ್ಲಿ ಭಾರತ ‘ಎ’ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 5 ಪಂದ್ಯಗಳಲ್ಲಿ 307 ರನ್ ಗಳಿಸಿದ್ದು, 4 ಬಾರಿ ಅಜೇಯವಾಗುಳಿದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಅಶ್ವಿನ್, ರವೀಂದ್ರ ಜಡೇಜ ಹಾಗೂ ಮುಹಮ್ಮದ್ ಶಮಿಗೆ ವಿಶ್ರಾಂತಿ ನೀಡಿ ಯುಝ್ವೆಂದ್ರ ಚಾಹಲ್, ಕುಲ್‌ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್‌ಗೆ ಅವಕಾಶ ನೀಡುವ ನಿರೀಕ್ಷೆಯಿದೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರಿತ್ ಬುಮ್ರಾ, ಮಧ್ಯಮ ಸರದಿ ದಾಂಡಿಗ ಕೇದಾರ್ ಜಾಧವ್ ಹಾಗೂ ಮಾಜಿ ನಾಯಕ ಎಎಸ್ ಧೋನಿ ತಂಡಕ್ಕೆ ವಾಪಸಾಗಲಿದ್ದಾರೆ.

ಸುರೇಶ್ ರೆನಾ ವಾಪಸ್?

ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಟೀಮ್ ಇಂಡಿಯಾಕ್ಕೆ ವಾಪಸಾಗುವ ಸಾಧ್ಯತೆಯಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯು ಆ.20 ರಂದು ಡಾಂಬುಲ್ಲಾ ದಲ್ಲಿ ಆರಂಭವಾಗಲಿದೆ. ಆರ್ಮ್‌ಸ್ಟರ್‌ಡಮ್‌ನಲ್ಲಿ ಎರಡು ತಿಂಗಳ ಕಾಲ ತರಬೇತಿ ನಡೆಸಿದ್ದ ರೈನಾ ಗುರುವಾರ ಎನ್‌ಸಿಎಗೆ ಸೇರ್ಪಡೆಯಾಗಿದ್ದಾರೆ. ರೈನಾ 2015ರ ಅಕ್ಟೋಬರ್‌ನಲ್ಲಿ ಭಾರತದ ಪರ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಟ್ವೆಂಟಿ-20 ಪಂದ್ಯವನ್ನು ಆಡಿದ್ದ ರೈನಾ 45 ಎಸೆತಗಳಲ್ಲಿ 63 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News