ಶೀಘ್ರವೇ ಹೊಸ ಹಜ್ ನೀತಿ ಜಾರಿ: ಅಬ್ಬಾಸ್ ನಕ್ವಿ

Update: 2017-08-13 03:52 GMT

ಮುಂಬೈ, ಆ.13: ಹೊಸ ಹಜ್ ನೀತಿಯನ್ನು ಈ ತಿಂಗಳು ಪ್ರಕಟಿಸಲಾಗುವುದು ಹಾಗೂ ಮುಂದಿನ ವರ್ಷದಿಂದ ಹಜ್ ಯಾತ್ರೆ ನೂತನ ನೀತಿಗೆ ಅನುಗುಣವಾಗಿ ನಡೆಯಲಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.

"ಹೊಸ ನೀತಿಯು ಹಜ್ ಯಾತ್ರೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಸುಲಲಿತವಾಗಿ ಮಾಡಲಿದೆ. ಹಜ್ ಯಾತ್ರಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದು ಈ ನೂತನ ನೀತಿಯ ಪ್ರಮುಖ ಅಂಶ" ಎಂದು 2017ರ ಹಜ್ ತಯಾರಿ ಅವಲೋಕನ ಸಭೆ ಮತ್ತು ವಾರ್ಷಿಕ ಹಜ್ ತಿಳಿವಳಿಕೆ ಶಿಬಿರದಲ್ಲಿ ವಿವರಿಸಿದರು.

ನೂತನ ಹಜ್ ನೀತಿಯ ಕರಡು ಸಿದ್ಧಪಡಿಸುವ ಸಲುವಾಗಿ ನೇಮಕ ಮಾಡಿದ್ದ ಉನ್ನತ ಮಟ್ಟದ ಸಮಿತಿ, ಹೊಸ ನೀತಿಗೆ ಅಂತಿಮ ರೂಪುರೇಷೆ ನೀಡುತ್ತಿದೆ ಎಂದು ವಿವರಿಸಿದ್ದಾರೆ. ಹಜ್ ಯಾತ್ರಿಗಳನ್ನು ಸಮುದ್ರ ಮಾರ್ಗದ ಮೂಲಕ ಹಜ್‌ ಯಾತ್ರೆಗೆ ಕಳುಹಿಸುವುದು ಕೂಡಾ ಹೊಸ ನೀತಿಯ ಪ್ರಮುಖ ಅಂಶ ಎಂದು ಪ್ರಕಟಿಸಿದರು.

"ಹಡಗಿನಲ್ಲಿ ಹಜ್ ಯಾತ್ರೆ ಕೈಗೊಳ್ಳುವುದರಿಂದ ವೆಚ್ಚ, ವಿಮಾನಯಾನಕ್ಕೆ ಆಗುವ ವೆಚ್ಚಕ್ಕಿಂತ ಅರ್ಧದಷ್ಟು ಕಡಿಮೆಯಾಗಲಿದೆ. ಇದು ಕ್ರಾಂತಿಕಾರಿ, ಬಡವರ ಪರ ಹಾಗೂ ಯಾತ್ರಿಸ್ನೇಹಿ ನಿರ್ಧಾರವಾಗಿದೆ ಎಂದು ಬಣ್ಣಿಸಿದರು.

ಸಮುದ್ರ ಮಾರ್ಗದಲ್ಲಿ ಜಿದ್ದಾಗೆ ಹಜ್ ಯಾತ್ರಿಕರನ್ನು ಕರೆದೊಯ್ಯುವ ವ್ಯವಸ್ಥೆ 1995ರಲ್ಲಿ ಸ್ಥಗಿತಗೊಂಡಿತ್ತು. ಇಂದಿನ ಆಧುನಿಕ ಹಡಗುಗಳು ಸುಸಜ್ಜಿತವಾಗಿದ್ದು, 4ರಿಂದ 5 ಸಾವಿರ ಮಂದಿಯನ್ನು ಏಕಕಾಲಕ್ಕೆ ಒಯ್ಯುವ ಸಾಮರ್ಥ್ಯ ಹೊಂದಿವೆ. ಎರಡು ಅಥವಾ ಮೂರು ದಿನಗಳ ಅವಧಿಯಲ್ಲಿ ಮುಂಬೈ ಹಾಗೂ ಜಿದ್ದಾ ನಡುವಿನ 2,300 ನಾಟಿಕಲ್ ಮೈಲು ದೂರವನ್ನು ಕ್ರಮಿಸಲಿವೆ ಎಂದು ವಿವರಿಸಿದರು. ಹಿಂದೆ ಈ ಅಂತರವನ್ನು ಕ್ರಮಿಸಲು 12 ರಿಂದ 15 ದಿನಗಳು ಬೇಕಾಗುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News