ಅನ್ಯಭಾಷೆಗಳ ನಾಮ ಫಲಕಗಳಿಂದ ಕನ್ನಡಕ್ಕೆ ಧಕ್ಕೆಯಾಗದು: ಅಜಯ್ ಕುಮಾರ್ ಸಿಂಗ್

Update: 2017-08-13 12:16 GMT

ಬೆಂಗಳೂರು, ಆ.13: ಕನ್ನಡ ಭಾಷಾ ಸಂಸ್ಕೃತಿಗೆ ತನ್ನದೆ ಆದ ಘನತೆ ಇದೆ. ನಮ್ಮ ಭಾಷೆಯ ಮೇಲೆ ಆತ್ಮವಿಶ್ವಾಸ, ಆತ್ಮಗೌರವ ಇರಬೇಕು. ಯಾವುದೋ ಭಾಷೆಯಲ್ಲಿ ನಾಮಫಲಕ ಬಂದರೆ ಏನು ಪರಿಣಾಮ ಬೀರಲ್ಲ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ರವಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಬಲ ಭಾಷೆಗಳ ಪ್ರಬಲ್ಯಗಳ ನಡುವೆ ಅಸ್ತಿತ್ವವನ್ನು ಕಳೆದುಕೊಳ್ಳುವಂತ ಭಾಷೆಗಳಂತೆ ಕನ್ನಡ ಸತ್ವ ಹೀನ ಭಾಷೆಯಲ್ಲ. ಕನ್ನಡಕ್ಕೆ ತನ್ನದೇ ಆದ ಸತ್ವ, ಘನತೆ ಇದೆ. ನಮ್ಮ ಭಾಷೆಯ ಕುರಿತು ನಮ್ಮಲ್ಲಿ ಗಟ್ಟಿಯಾದ ಆತ್ಮವಿಶ್ವಾಸ, ಆತ್ಮಗೌರವ ಇರಬೇಕು ಎಂದು ತಿಳಿಸಿದರು.

ಮಾನವನ ವಿಕಾಸದಲ್ಲಿ ಭಾಷೆಗೆ ತನ್ನದೇ ಆದ ಪಾತ್ರವಿದೆ. ಪ್ರಪಂಚ ಎನ್ನುವುದು ಸಂಬಂಧಗಳ ಜಾಲ. ಈ ಸಂಬಂಧಗಳ ಸಂವಹನ ಕೊಂಡಿಯಾಗಿ ಭಾಷೆ ಕಾರ್ಯನಿರ್ವಹಿಸುತ್ತದೆ. ಭಾಷೆ ಎನ್ನುವುದು ನಿಂತ ನೀರಲ್ಲ. ಅದು ಸದಾ ಹರಿಯುವ ಹೊಳೆ. ನಮ್ಮ ಭಾಷೆಯ ಮೇಲಿನ ಗೌರವದ ಜೊತೆಗೆ ಇತರೆ ಭಾಷೆಗಳೊಂದಿಗೆ ಸೌಹಾರ್ದ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಕನ್ನಡದ ಕವಿ ಸರ್ವಜ್ಞ ಮತ್ತು ತಮಿಳು ಕವಿ ತಿರುವಳ್ಳವರ್ ದೇಶದ ಅದ್ಬುತ ರತ್ನಗಳು. ಈ ಎರಡು ಭಾಷೆಗಳ ಸಂಬಂಧವನ್ನು ಗಟ್ಟಿಗೊಳಿಸಲು ಈ ಮಹಾ ಪುರಷರು ಪ್ರೇರಕರಾಗಿದ್ದಾರೆ. ಇವರ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು. ಅಂತರ್ ಭಾಷಾ ಸಂಬಂಧಗಳನ್ನು ಗಟ್ಟಿಗೊಳಿಸಲು ಈ ರೀತಿಯ ಭಾಷಾ ಸೌಹಾರ್ದ ಕಾರ್ಯಕ್ರಮಗಳನ್ನು ಎಲ್ಲ ರಾಜ್ಯಗಳಲ್ಲಿ ಹಮ್ಮಿಕೊಳ್ಳುವುದು ಅಗತ್ಯವಿದೆ. ಇಂತಹ ಕಾರ್ಯಕ್ರಮಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ದೂರದ ಯುರೋಪಿಯನ್ ಮತ್ತು ಫ್ರೆಂಚ್ ಸಾಹಿತ್ಯದ ಕುರಿತು ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ ನಮ್ಮ ಅಕ್ಕಪಕ್ಕದಲ್ಲಿರುವ ತೆಲುಗು, ತಮಿಳು, ಮಲಯಾಳಂ ಸಾಹಿತ್ಯವನ್ನು ತಿಳಿದುಕೊಂಡಿಲ್ಲ. ದೇಶಿ ಭಾಷೆಗಳ ಸಾಹಿತ್ಯದಲ್ಲಿ ದೇಶದೊಳಗಿನ ಸಮಸ್ಯೆಗಳನ್ನು ಸ್ವಾರಸ್ಯಕರವಾಗಿ ವ್ಯಕ್ತಪಡಿಸಿವೆ. ಇದನ್ನು ಎಲ್ಲ ಭಾಷಿಗರಿಗೂ ತಿಳಿಯಲು ಅನುವಾದಿತ ಪುಸ್ತಕಗಳು ಹೆಚ್ಚಾಗಿ ಹೊರಬರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News