ಮಗನ ಮುಂದೆಯೇ ತಾಯಿಯನ್ನು ನಗ್ನಗೊಳಿಸಿ, ಥಳಿಸಿ, ಚರಂಡಿ ನೀರು ಕುಡಿಸಿ ಕೊಲೆಗೈದ ಗ್ರಾಮಸ್ಥರು

Update: 2017-08-14 04:21 GMT

ಜೈಪುರ, ಆ. 14: 'ನೀನು ಒಳಗೆ ಹೋಗು; ಇಲ್ಲದಿದ್ದರೆ ತಾಯಿಯನ್ನು ಕಳುಹಿಸಿದಲ್ಲಿಗೇ ನಿನ್ನನ್ನೂ ಕಳುಹಿಸಬೇಕಾಗುತ್ತದೆ' ತಾಯಿಯ ಮೇಲೆ ನಡೆಯುತ್ತಿದ್ದ ಪೈಶಾಚಿಕ ಕೃತ್ಯವನ್ನು ತಡೆಯಲು ಬಂದ ಹದಿನೈದರ ಬಾಲಕ ಹಾಗೂ ಆತನ ಸಂಬಂಧಿ ಯುವತಿಗೆ ಗ್ರಾಮಸ್ಥರು ಹಾಕಿದ ಬೆದರಿಕೆ ಇದು !

ಬಾಲಕನ ಕಣ್ಣೆದುರೇ, ಆ ತಾಯಿಯನ್ನು ಗ್ರಾಮಸ್ಥರು ಮನಸೋ ಇಚ್ಛೆ ಥಳಿಸಿದರು; ನಗ್ನವಾಗಿ ಮೆರವಣಿಗೆ ಮಾಡಿದರು; ಮಲ ತಿನ್ನಿಸಿ, ಕೈಗಳ ಮೇಲೆ ಕೆಂಡ ಸುರಿದರು. ಚಿತ್ರಹಿಂಸೆ ಅನುಭವಿಸಿ ಕೊನೆಗೆ ಮಹಿಳೆ ಇಹಲೋಕ ತ್ಯಜಿಸಿದಳು !

ತಿಂಗಳ ಹಿಂದಷ್ಟೇ ತಂದೆ ಅನಾರೋಗ್ಯದಿಂದ ತೀರಿಕೊಂಡಿದ್ದರು. ಗಾಯದ ಮೇಲೆ ಬರೆ ಎಂಬಂತೆ ತಾಯಿಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನೆಲ್ಲ ಕಣ್ಣಾರೆ ಕಂಡ ಬಾಲಕ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ.

'ಇಬ್ಬರು ಬಾಲಕಿಯರು ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸತೊಡಗಿದರು. ತಮ್ಮ ಮೈಮೇಲೆ ವಿಚಿತ್ರ ಶಕ್ತಿ ಆವಾಹನೆಯಾಗಿದೆ ಎಂದು ಹೇಳುತ್ತಾ ನನ್ನ ತಾಯಿಯನ್ನು ಮಾಟಗಾತಿ ಎಂದು ಹೇಳಿದರು. ಆ ಪೈಕಿ ಒಬ್ಬಾಕೆ ತಾಯಿಯ ತಲೆಗೂದಲು ಎಳೆದಳು. ನಂತರ ಇಡೀ ಗ್ರಾಮಸ್ಥರು ಸೇರಿಕೊಂಡು ತಾಯಿಯನ್ನು ಥಳಿಸಿದರು' ಎಂದು ಬಾಲಕ ಘಟನೆಯನ್ನು ನೆನಪಿಸಿಕೊಂಡ.

'ಆ ವೇಳೆಗೆ 8-10 ಮಂದಿ ಸೇರಿಕೊಂಡು ಪಕ್ಕದ ಹೊಲದಿಂದ ಮಲ ತಂದು ತಾಯಿಗೆ ತಿನ್ನಿಸಿದರು; ಚರಂಡಿ ನೀರು ಕುಡಿಸಿದರು. ನಾನು ಪರಿಪರಿಯಾಗಿ ಬೇಡಿದರೂ ಅವರಿಗೆ ಕರುಣೆ ಬರಲಿಲ್ಲ. ನೋಡನೋಡುತ್ತಿದ್ದಂತೆ ಬಟ್ಟೆ ಬಿಚ್ಚಿ ನಗ್ನವಾಗಿಸಿದಾಗ ತಡೆದುಕೊಳ್ಳಲಾಗಲಿಲ್ಲ. ಮಧ್ಯಪ್ರವೇಶಿಸಲು ಹೋದಾಗ ತಡೆದು ಬೆದರಿಕೆ ಹಾಕಿದರು. ತಾಯಿಗೆ ಮಾತನಾಡಲು ಅವಕಾಶವೇ ನೀಡದೇ ಮಾಟಗಾತಿ ಎಂದು ದೂಷಿಸಿ ಚಿತ್ರಹಿಂಸೆ ನೀಡಿದರು'

ಚಿತ್ರಹಿಂಸೆಯಿಂದ ಮಹಿಳೆ ಮೃತಪಟ್ಟರು. ಬಳಿಕ ಸ್ಥಳೀಯ ಖಪ್ ಪಂಚಾಯತ್, ಹಂತಕರಿಗೆ ದಂಡ ವಿಧಿಸಿ, ಪಾಪ ತೊಳೆದುಕೊಳ್ಳುವಂತೆ ಸೂಚಿಸಿದರು. ವಿಚಿತ್ರವಾಗಿ ವರ್ತಿಸಿದ ಇಬ್ಬರು ಬಾಲಕಿಯರನ್ನೂ ಕೆರೆಯಲ್ಲಿ ಮುಳುಗಿಸಿ ಪಾಪ ಪರಿಹಾರ ಮಾಡಿಸಿದರು. ಕೊನೆಗೆ ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಬಾರದು ಎಂದು ಸೂಚಿಸಿದ್ದಾಗಿ ಬಾಲಕ ವಿವರಿಸಿದ್ದಾನೆ.

ಇಷ್ಟು ಸಾಲದೆಂಬಂತೆ ಬಾಲಕನ ಯೋಗಕ್ಷೇಮ ನೋಡಿಕೊಳ್ಳುವಂತೆ ತಾಯಿಯ ಹಂತಕರಿಗೆ ಸೂಚಿಸಿದ್ದಾರೆ. ಬಿಲ್ವಾರಾ ಮೂಲದ ಬಲ ಏವಂ ಮಹಿಳಾ ಚೇತನ ಸಮಿತಿಯ ಅಧ್ಯಕ್ಷೆ ತಾರಾ ಅಹ್ಲುವಾಲಿಯಾ ಈ ಘಟನೆಯನ್ನು ಬೆಳಕಿಗೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News