ಹಜ್: ಪವಿತ್ರ ಸ್ಥಳಗಳಲ್ಲಿ ಅಡುಗೆ ಅನಿಲಕ್ಕೆ ನಿಷೇಧ

Update: 2017-08-14 12:26 GMT

ರಿಯಾದ್, ಆ.14: ಹಜ್ ಸಮಯದಲ್ಲಿ ಪವಿತ್ರ ಸ್ಥಳಗಳಲ್ಲಿ ಅಡುಗೆ ಅನಿಲವನ್ನು ಉಪಯೋಗಿಸಲು ಅನುಮತಿಸುವುದಿಲ್ಲ ಎಂದು ಸೌದಿ ಗೃಹಸಚಿವಾಲಯ ತಿಳಿಸಿದೆ. ಬೆಂಕಿ ಅವಘಡ ಸಾಧ್ಯತೆಯನ್ನು ಪರಿಗಣಿಸಿ ಮಿನಾ, ಅರಫಾ, ಮುಸ್ದಲಿಫಗಳಲ್ಲಿ ಅಡುಗೆ ಅನಿಲ ಬಳಕೆ ನಿಷೇಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಹಜ್‌ಕರ್ಮದ ಭಾಗವಾಗಿ ಯಾತ್ರಾರ್ಥಿಗಳು ಆರಾಧನಾ ಕರ್ಮಗಳಿಗಾಗಿ ಒಟ್ಟುಸೇರುವ ಮಿನಾ, ಅರಫಾ, ಮುಸ್ದಲಿಫಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬಳಕೆ ನಿಷೇಧಿಸಿ ಗೃಹಸಚಿವ ಅಮೀರ್ ಅಬ್ದುಲ್ ಅಝೀರ್ ಬಿನ್ ಸವೂದ್ ಬಿನ್ ನಾಯಿಫ್ ಆದೇಶ ಹೊರಡಿಸಿದ್ದಾರೆ. ಯಾತ್ರಿಕರ ಟೆಂಟ್‌ಗಳಲ್ಲಿ ಸರಕಾರಿ ಕ್ಯಾಂಪ್‌ಗಳಲ್ಲಿ ಅಡುಗೆ ಅನಿಲ ಬಳಕೆಯ ನಿಷೇಧ ಮುಂದುವರಿಯಲಿದೆ ಎಂದು ಸಚಿವಾಲಯ ತಿಳಿಸಿದೆ. ಕಾನೂನು ಉಲ್ಲಂಘಿಸಿ ಪವಿತ್ರಸ್ಥಳಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ತರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವಾಲಯ ಎಚ್ಚರಿಸಿದೆ.  ವಿವಿಧ ಇಲಾಖೆಗಳನ್ನು ಏಕೀಕರಿಸಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸೌದಿ ನಾಗರಿಕ ರಕ್ಷಣಾ ಮುಖ್ಯಸ್ಥ ಜನರಲ್ ಸುಲೈಮಾನ್ ಅಲ್‌ಅಮ್ರ್ ಹೇಳಿದರು. ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಸಿವಿಲ್ ಡಿಫೆನ್ಸ್ ವಿಭಾಗಕ್ಕೆ ಅಧಿಕಾರ ನೀಡಲಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗಳು ಮತ್ತು ಗ್ಯಾಸ್‌ಸ್ಟೌವ್‌ಗಳು ಪವಿತ್ರಸ್ಥಳಗಳಲ್ಲಿ ಇಲ್ಲವೆನ್ನುವುದನ್ನುದೃಢಪಡಿಸಿಕೊಳ್ಳಲಾಗುವುದು. ಕಾನೂನು ಉಲ್ಲಂಘಿಸುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುವುದು. ಸಿಲಿಂಡರ್ ವಶಪಡಿಸಿಕೊಳ್ಳಲಾಗುವುದು. ಮಿನದ ಟೆಂಟ್‌ಗಳಲ್ಲಿ ತಪಾಸಣೆ ನಡೆಸಲು ಸಿವಿಲ್ ಡಿಫೆನ್ಸ್ ಅಧಿಕಾರಿಗಳ ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ಜನರಲ್ ಸುಲೈಮಾನ್ ಅಲ್‌ಅಮ್ರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News