ಮೃತ ಬಾಲಕಿ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ: ಮೇಯರ್

Update: 2017-08-14 12:48 GMT

ಬೆಂಗಳೂರು, ಆ.14: ನಗರದ ಕೆ.ಆರ್.ಪುರಂನ ಎಂ.ವಿ.ಜೆ. ಉದ್ಯಾನವನದಲ್ಲಿ ಆಟವಾಡುತ್ತಿದ್ದ ವೇಳೆ ಕಬ್ಬಿಣದ ರಾಡ್ ಬಿದ್ದು ಮೃತಪಟ್ಟ ಬಾಲಕಿ ಪ್ರಿಯಾ ಕುಟುಂಬಕ್ಕೆ ಮೇಯರ್ ಪದ್ಮಾವತಿ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಸೋಮವಾರ ಬಾಲಕಿ ಮೃತಪಟ್ಟ ಉದ್ಯಾನವನ ಮತ್ತು ಬಾಲಕಿಯ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರನ್ನು ಸಂತೈಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಿರ್ಲಕ್ಷ ವಹಿಸಿದ ಕಾರಣಕ್ಕೆ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉದ್ಯಾನದಲ್ಲಿನ ಪರಿಕರಗಳು ಶಿಥಿಲಗೊಂಡಿದ್ದರಿಂದ ಹೊಸ ಪರಿಕರಗಳನ್ನು ಅಳವಡಿಸಲು ಉದ್ಯಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಅಜ್ಜಿಯೊಬ್ಬರು ಮಕ್ಕಳು ಆಟವಾಡಬೇಕು ಎಂದು ಬಲವಂತವಾಗಿ ಬೀಗ ತೆಗೆಸಿದ್ದಾರೆ. ನಂತರ ಈ ದುರ್ಘಟನೆ ನಡೆದಿದೆ ಎಂದು ವಿವರಿಸಿದರು.
ಘಟನೆ ನಡೆದು ಮಗು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಕೆಲವರು ಮೊಬೈಲ್‌ನಿಂದ ವಿಡಿಯೋ ತೆಗೆಯುತ್ತಿದ್ದರು. ಇದು ಅಮಾನವೀಯ. ವಿಡಿಯೋ ತೆಗೆಯುವುದನ್ನು ಬಿಟ್ಟು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರೆ ಮಗು ಉಳಿಯುತ್ತಿತ್ತು ಎಂದರು.

ಮೇಯರ್ ವಿರುದ್ಧ ಆಕ್ರೋಶ: ಶನಿವಾರ ಸಂಜೆ ಈ ದುರ್ಘಟನೆ ನಡೆದು ಎರಡು ದಿನಗಳ ಮೇಲೆ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದ ಮೇಯರ್ ಪದ್ಮಾವತಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾನು ಊರಲ್ಲಿ ಇರಲಿಲ್ಲ, ನಗರಕ್ಕೆ ಇಂದು ಬೆಳಗ್ಗೆಯೇ ಬಂದಿದ್ದು, ನೇರವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸಮಾಧಾನಪಡಿಸಿದರು.

ಬಾಲಕಿ ಸಾವನ್ನು ಮುಂದಿಟ್ಟುಕೊಂಡು ಯಾರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು. ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. 
 
ಪಾಲಿಕೆ ನೀಡುವ ಹಣದಿಂದ ನನ್ನ ಮಗಳು ಮರಳಿ ಬರುವುದಿಲ್ಲ. ನನ್ನ ಮಗುವಿಗೆ ಆದ ಪರಿಸ್ಥಿತಿ ಇನ್ನು ಯಾರಿಗೆ ಬರಬಾರದು. ಯಾವುದೇ ಪರಿಹಾರ ನನಗೆ ಬೇಕಿಲ್ಲ. -ಸುಬ್ರಹ್ಮಣ್ಯ, ಮೃತ ಪ್ರಿಯಾಳ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News