×
Ad

ಮಳೆ ಆಧಾರಿತ ಬೆಳೆ ಬೆಳೆಯಲು ರೈತರಿಗೆ ಮನವಿ: ಪ್ರಸ್ತುತ ಇರುವ ಬೆಳೆಗೆ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ

Update: 2017-08-14 19:22 IST

ಬೆಂಗಳೂರು, ಆ. 14: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಈ ಭಾರಿಯೂ ಮಳೆಯ ಕೊರತೆ ಉಂಟಾಗಿದ್ದು, ಜಲಾಶಯಗಳಲ್ಲಿ ಪ್ರಸ್ತುತ ಸಂಗ್ರಹ ಆಗಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿಯಷ್ಟೇ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ಆ.9ರಂದು ಮಂಡ್ಯ ಭಾಗದ ಮುಖಂಡರ ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಈಗಿರುವ ನೀರಿನಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಹಾಲಿ ಬೆಳೆದಿರುವ ಕಬ್ಬಿನ ಬೆಳೆಗೆ ನೀರು ಬಿಡುವಂತೆ ಸಭೆಯಲ್ಲಿ ಕೋರಿದ್ದರು. ಆದುದರಿಂದ ಇರುವ ಬೆಳೆಗೆ ನೀರು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಮಂಡ್ಯ ಭಾಗದ ರೈತರು ಮಳೆ ಆಧಾರಿತ ಬೆಳೆ ಬೆಳೆಯುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ಆ ಭಾಗದ ಕೆರೆ ತುಂಬಿಸುವ ಕೆಲಸವನ್ನು ಮಾಡಲಾಗುವುದು. ಕೆಆರ್‌ಎಸ್, ಹಾರಂಗಿ, ಕಬಿನಿ ಹಾಗೂ ಹೇಮಾವತಿ ಸೇರಿ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆ ಎಂದು ವಿವರ ನೀಡಿದರು.

ಜೂನ್ ಹಾಗೂ ಜುಲೈ ಎರಡು ತಿಂಗಳಲ್ಲಿ ತಮಿಳುನಾಡಿಗೆ ಒಟ್ಟು 44 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸಭೆಗೆ ತಿಳಿಸಿದರು.

ಆ.9ರಂದು ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೀಡಿದ ಸೂಚನೆಗಳನ್ನು ಅಧಿಕಾರಿಗಳು ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಕೂಡಲೇ ಆ ಭಾಗದ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.

ಸಭೆಯಲ್ಲಿ ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಚ್.ಡಿ.ರೇವಣ್ಣ, ಚೆಲುವರಾಯಸ್ವಾಮಿ, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಡಿ.ಕೆ.ಶಿವಕುಮಾರ್, ಎ.ಮಂಜು, ಕೃಷ್ಣಬೈರೇಗೌಡ, ಸೀತಾರಾಂ, ಕೆ.ಜೆ. ಜಾರ್ಜ್, ಯು.ಟಿ.ಖಾದರ್, ಎಂ.ಕೃಷ್ಣಪ್ಪ, ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News