ಕ್ಷಮೆ ಕೋರುವಂತೆ ಶಾಸಕ ಚಲುವರಾಯಸ್ವಾಮಿ ಆಗ್ರಹ
ಬೆಂಗಳೂರು, ಆ.14: ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಎದುರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತಿದ್ದು ಸರಿಯಲ್ಲ ಎಂದು ಮಂಡ್ಯ ಜಿಲ್ಲೆಯ ನಾಗಮಂಗಲ ಶಾಸಕ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮಿತ್‌ಶಾ ವರ್ತನೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ವಿವಾದವನ್ನು ಮತ್ತಷ್ಟು ದೊಡ್ಡದಾಗಿ ಬೆಳೆಯಲು ಅವಕಾಶ ನೀಡದೆ, ಬಿಜೆಪಿ ನಾಯಕರು ಅಮಿತ್‌ಶಾ ರಿಂದ ಕೂಡಲೆ ಕ್ಷಮಾಪಣೆ ಹೇಳಿಸಬೇಕು ಎಂದು ಆಗ್ರಹಿಸಿದರು.
ಆದಿ ಚುಂಚನಗಿರಿ ಮಠ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸಮಾಜದಲ್ಲಿನ ಎಲ್ಲ ವರ್ಗಗಳಿಗೂ ಶಿಕ್ಷಣ, ಆರೋಗ್ಯದ ಸೇವೆಯನ್ನು ಒದಗಿಸುತ್ತಿದೆ. ಮಠದ ಕಾರ್ಯಚಟುವಟಿಕೆಗಳು ಹಳೆ ಮೈಸೂರು ಭಾಗಕ್ಕಷ್ಟೇ ಸೀಮಿತವಾಗಿಲ್ಲ, ಉತ್ತರ ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲೂ ನಡೆಯುತ್ತಿವೆ ಎಂದು ಅವರು ಹೇಳಿದರು.
ಶ್ರೀಮಠಕ್ಕೆ ಯಾವ ರಾಜಕೀಯ ಪಕ್ಷದ ಮುಖಂಡರು ಬೇಕಾದರೂ ಹೋಗಬಹುದು, ಆಶೀರ್ವಾದ, ಮಾರ್ಗದರ್ಶನ ಪಡೆಯಬಹುದು. ಅದಕ್ಕೆ ಯಾರೂ ಅಪಸ್ವರ ಎತ್ತುವುದಿಲ್ಲ. ಅಮಿತ್ ಶಾ ವರ್ತನೆ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ ಎಂದು ಚಲುವರಾಯಸ್ವಾಮಿ ಟೀಕಿಸಿದರು.
ನಿರ್ಮಲಾನಂದ ಸ್ವಾಮಿಯನ್ನು ಬಿಜೆಪಿ ಪಕ್ಷಕ್ಕೆ ಕರೆತರುವ ರೀತಿಯಲ್ಲಿ ಆ ಪಕ್ಷದ ನಾಯಕರು ವರ್ತಿಸಿದ್ದಾರೆ. ಪಕ್ಷಾತೀತವಾಗಿರುವ ಸ್ವಾಮೀಜಿಯನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸುವಂತೆ ನಡೆದ ಬೆಳವಣಿಗೆಗಳನ್ನು ಯಾರೂ ಒಪ್ಪುವುದಿಲ್ಲ ಎಂದು ಚಲುವರಾಯಸ್ವಾಮಿ ತಿಳಿಸಿದರು.
ನಾನು ಯಾವ ರಾಜಕೀಯ ಪಕ್ಷದೊಂದಿಗೂ ಗುರುತಿಸಿಕೊಳ್ಳುವುದಿಲ್ಲ, ಸಮಾಜದ ಒಳಿತಷ್ಟೇ ತನ್ನ ಕೆಲಸ ಎಂದು ಈಗಾಗಲೆ ನಿರ್ಮಲಾನಂದ ಸ್ವಾಮಿಗಳು ಸ್ಪಷ್ಟಪಡಿಸಿದ್ದಾರೆ. ಆದುದರಿಂದ, ಬಿಜೆಪಿ ನಾಯಕರು ಇಂತಹ ವಿಚಾರದಲ್ಲಿ ಭವಿಷ್ಯದಲ್ಲಿ ಯಾವುದೆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಆದಾಯ ತೆರಿಗೆ ಇಲಾಖೆಯ ದಾಳಿಗೆ ಒಳಗಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿ, ಅವರ ರಾಜೀನಾಮೆಗೆ ಆಗ್ರಹಿಸುವಂತೆ ಅಮಿತ್ ಶಾ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ. ಶಿವಕುಮಾರ್ ಮೇಲೆ ದಾಳಿ ನಡೆಸಿದ್ದು ಬಿಜೆಪಿ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಈಗ ಅಮಿತ್ ಶಾ ಸೂಚನೆಯು ಅದಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ರಾಹುಲ್‌ಗಾಂಧಿ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಜೊತೆಯಲ್ಲಿ ಆ.17ರಂದು ಹೊಸದಿಲ್ಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ನಾವು 7 ಜನ ಶಾಸಕರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ರಾಮಕೃಷ್ಣ ಭೇಟಿಯಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ಜೆಡಿಎಸ್ ಪಕ್ಷದಿಂದ ನಮ್ಮನ್ನು ಅಮಾನತ್ತಿನಲ್ಲಿಟ್ಟ ನಂತರ ಮುಖ್ಯಮಂತ್ರಿ ಜೊತೆ ಮಾತ್ರ ನಾವು ನಿರಂತರ ಸಂಪರ್ಕದಲ್ಲಿದ್ದೆವು. ಇದೇ ಮೊದಲ ಬಾರಿಗೆ ರಾಷ್ಟ್ರೀಯ ನಾಯಕತ್ವದೊಂದಿಗೆ ಚರ್ಚೆಗೆ ತೆರಳುತ್ತಿದ್ದೇವೆ. ಕಾಂಗ್ರೆಸ್ ಸೇರ್ಪಡೆಗೆ ಸಂಬಂಧಿಸಿದಂತೆ ಇದು ಮೊದಲ ಹಂತದ ಮಾತುಕತೆಯಾಗಲಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್‌ಬಂಡಿಸಿದ್ದೇಗೌಡ ಉಪಸ್ಥಿತರಿದ್ದರು.