ಆರ್.ಅಶೋಕ್ ವಿರುದ್ಧ ಆರೆಸೆಸ್ಸ್ ನಾಯಕರ ದೂರು?

Update: 2017-08-14 13:59 GMT

ಬೆಂಗಳೂರು, ಆ.14: ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧ ಆರೆಸೆಸ್ಸ್‌ನ ಹಿರಿಯ ನಾಯಕರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಯ ಕಾರ್ಯಚಟುವಟಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಜೊತೆ ಅಶೋಕ್ ನಡೆಸುತ್ತಿರುವ ಹೊಂದಾಣಿಕೆ ರಾಜಕೀಯದಿಂದಾಗಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೆಸೆಸ್ಸ್ ನಾಯಕರು ದೂರಿದ್ದಾರೆ ಎನ್ನಲಾಗಿದೆ.

ಇನ್ನು ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ವ್ಯವಹಾರಿಕ ಸಂಬಂಧವಿಟ್ಟುಕೊಂಡಿದ್ದಾರೆ. ಇದರಿಂದಾಗಿ, ಆ ಪಕ್ಷದ ಮುಖಂಡರ ವಿರುದ್ಧ ಯಾವುದೆ ಪ್ರತಿಭಟನೆಗಳು ನಡೆಸಲು ಅಶೋಕ್ ಸೇರಿದಂತೆ ಇನ್ನಿತರ ನಾಯಕರು ಅವಕಾಶ ಕಲ್ಪಿಸಿಕೊಡುತ್ತಿಲ್ಲ ಎಂದು ಅಮಿತ್‌ಶಾಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡುವುದಿರಲಿ, ರಾಜೀನಾಮೆಯನ್ನು ಕೇಳಿಲ್ಲ. ಈ ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಹಾನಿಯಾಗುತ್ತಿದ್ದು, ಅಶೋಕ್ ಸೇರಿದಂತೆ ಇನ್ನಿತರರಿಗೆ ಈ ವಿಚಾರದಲ್ಲಿ ಸೂಕ್ತ ತಾಕೀತು ಮಾಡುವಂತೆ ಆರೆಸೆಸ್ಸ್ ಮುಖಂಡರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News