ಬಿಜೆಪಿಯಿಂದ ದೇಶಭಕ್ತಿಯ ಪ್ರಮಾಣಪತ್ರದ ಅಗತ್ಯವಿಲ್ಲ: ರಿಝ್ವಾನ್ ಅರ್ಶದ್

Update: 2017-08-14 16:50 GMT

ಬೆಂಗಳೂರು, ಆ.14: ಬಿಜೆಪಿ ಮುಖಂಡರಿಂದ ದೇಶಭಕ್ತಿಯ ಪ್ರಮಾಣ ಪತ್ರವನ್ನು ಪಡೆಯುವ ಅಗತ್ಯ ಮುಸ್ಲಿಮರಿಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ರಿಝ್ವಿನ್‌ ಅರ್ಶದ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿನ ಬಿಜೆಪಿ ಸರಕಾರಗಳು, ಮದ್ರಸಾಗಳಲ್ಲಿ ಸ್ವಾತಂತ್ರ ದಿನಾಚರಣೆಯಂದು ನಡೆಯುವ ಕಾರ್ಯಕ್ರಮಗಳ ವೀಡಿಯೋ ಚಿತ್ರೀಕರಣ ಮಾಡುವಂತೆ ಹೊರಡಿಸಿರುವ ಸುತ್ತೋಲೆಗೆ ಆಕ್ರೋಶ ವ್ಯಕ್ತಪಡಿಸಿದರು.

ಮದ್ರಸಾಗಳಲ್ಲಿ ಸ್ವಾತಂತ್ರ ದಿನಾಚರಣೆ ಹಾಗೂ ಗಣರಾಜ್ಯೋತ್ಸವವನ್ನು ಆರಂಭದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ನಾಗ್ಪುರದಲ್ಲಿರುವ ಆರೆಸೆಸ್ಸ್ ಕೇಂದ್ರ ಕಚೇರಿಯ ಮೇಲೆ 52 ವರ್ಷಗಳ ನಂತರ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಅಂತಹವರು ನಮ್ಮ ದೇಶಭಕ್ತಿಯ ಬಗ್ಗೆ ಪರೀಕ್ಷೆ ಮಾಡಲು ಮುಂದೆ ಬಂದಿದ್ದಾರೆ ಎಂದು ರಿಝ್ವಾನ್‌ಅರ್ಶದ್ ಕಿಡಿಗಾರಿದರು.

ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ತಮ್ಮ ಸರ್ವಸ್ವವನ್ನು ಕಳೆದುಕೊಂಡವರನ್ನು ಅನುಮಾನದಿಂದ ನೋಡಲಾಗುತ್ತಿದೆ. ಆದರೆ, ಯಾರು ಬ್ರಿಟಿಷರ ಜೊತೆ ಕೈ ಜೋಡಿಸಿದರೋ ಅವರು ಇಂದು ತಮ್ಮನ್ನು ದೇಶಭಕ್ತರೆಂದು ಬಿಂಬಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಅವರು ಹೇಳಿದರು.
ದೇಶದ ಇತಿಹಾಸವನ್ನು ಮುಸ್ಲಿಮರು ಅಧ್ಯಯನ ನಡೆಸಬೇಕು. ಪ್ರಮುಖವಾಗಿ ಯುವ ಸಮೂಹ ಇತಿಹಾಸವನ್ನು ಅರ್ಥಮಾಡಿಕೊಳ್ಳದಿದ್ದರೆ, ಅವರ ಭವಿಷ್ಯ ಆತಂಕಕ್ಕೆ ಒಳಗಾಗಬಹುದು. ದೇಶದ ಸ್ವಾತಂತ್ರ ಸಂಗ್ರಾಮಕ್ಕೆ ನಮ್ಮ ಪೂರ್ವಿಕರು ಮಾಡಿರುವ ತ್ಯಾಗ, ಬಲಿದಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.

ಬಿಜೆಪಿಗೆ ಶಾ ಅನಿವಾರ್ಯ: ರಾಜ್ಯದಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಗೆಲ್ಲಬೇಕಾದರೆ ಅವರಿಗೆ ಅಮಿತ್‌ಶಾ ತಂತ್ರಗಾರಿಕೆಯ ಅಗತ್ಯವಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಮಿತ್‌ಶಾ ಸಾಕಷ್ಟು ಶ್ರಮಿಸಿದ್ದಾರೆ. ತಳಮಟ್ಟದಲ್ಲಿ ಹಿಂದೂ ಹಾಗೂ ಮುಸ್ಲಿಮರಲ್ಲಿ ಒಡಕು ಮೂಡಿಸಲು ಸಾಮಾನ್ಯ ವ್ಯಕ್ತಿಯಿಂದ ಸಾಧ್ಯವಿರಲಿಲ್ಲ ಎಂದು ಅವರು ಕಿಡಿಗಾರಿದರು.

ಕರ್ನಾಟಕದಲ್ಲಿಯೂ ಈ ರೀತಿಯ ಪ್ರಯತ್ನವನ್ನು ಅವರು ನಡೆಸುತ್ತಾರೆ. ಆದರೆ, ನಾವು ಹಾಗೂ ನಮ್ಮ ಸರಕಾರ ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಮುಖ್ಯಮಂತ್ರಿಯೂ ಹಿಂದೂ ಸಮುದಾಯದವರು. ಆದರೆ, ಅವರು ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ತತ್ವದಲ್ಲಿ ನಂಬಿಕೆಯಿಟ್ಟಿದ್ದಾರೆ. ಬಿಜೆಪಿಯವರಂತೆ ಹಿಂದುತ್ವದ ಪ್ರತಿಪಾದನೆಯನ್ನು ಮಾಡುವುದಿಲ್ಲ ಎಂದು ರಿಝ್ವಾನ್‌ಅರ್ಶದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News