ಭಾಸ್ಕರ್‌ಶೆಟ್ಟಿ ಮರಣ ಪ್ರಮಾಣ ಪತ್ರ ರದ್ದು ಕೋರಿ ಅರ್ಜಿ ಸಲ್ಲಿಕೆ: ಸರಕಾರಕ್ಕೆ ಹೈಕೋರ್ಟ್ ನೋಟೀಸ್

Update: 2017-08-14 15:12 GMT

ಬೆಂಗಳೂರು, ಆ.14: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಸಾವನ್ನು ದೃಢೀಕರಿಸಿ ಕಾರ್ಕಳ ತಹಶೀಲ್ದಾರ್ ನೀಡಿದ್ದ ಮರಣ ಪ್ರಮಾಣ ಪತ್ರ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರಾಸಿಕ್ಯೂಷನ್, ಮಣಿಪಾಲ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್, ಕಾರ್ಕಳ ತಹಶೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಭಾಸ್ಕರ್‌ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಉದ್ಯಮಿ ಭಾಸ್ಕರ್‌ಶೆಟ್ಟಿ ಅವರ ಮರಣದ ಬಗ್ಗೆ ವೈದ್ಯಾಧಿಕಾರಿಗಳು ಅಂತಿಮ ವರದಿಯನ್ನು ನೀಡಿಲ್ಲ. ಹಾಗೂ ಸರಕಾರ ಭಾಸ್ಕರ್‌ಶೆಟ್ಟಿ ಮರಣದ ಬಗೆಗಿನ ಯಾವುದೇ ಕಾನೂನನ್ನು ಪಾಲಿಸಿಲ್ಲ. ಹೀಗಾಗಿ, ಭಾಸ್ಕರ್‌ಶೆಟ್ಟಿ ಮರಣದ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
       
ಅರ್ಜಿದಾರರು ಭಾಸ್ಕರ್‌ಶೆಟ್ಟಿ ಅವರು ಕಾಣೆಯಾಗಿದ್ದಾರೆ ಎಂಬ ದೂರನ್ನು ದಾಖಲಿಸಿದರೂ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳದೇ ಕಾನೂನು ಬಾಹಿರವಾಗಿ ಹಾಗೂ ಕಾನೂನು ವ್ಯಾಪ್ತಿ ಮೀರಿ ಭಾಸ್ಕರ್‌ಶೆಟ್ಟಿ ಅವರ ಮರಣ ಪತ್ರ ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಾಸಿಕ್ಯೂಷನ್, ಮಣಿಪಾಲ್ ಪೊಲೀಸ್ ಠಾಣಾ ಇನ್ಸಪೆಕ್ಟರ್, ಕಾರ್ಕಳ ತಹಶೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News