ಕೇಂದ್ರ ಸರಕಾರದಿಂದ ಕಾರ್ಮಿಕ ಹಕ್ಕುಗಳು ನಾಶ ಮಾಡುವ ಹುನ್ನಾರ: ವಿ.ಗೋಪಾಲಗೌಡ

Update: 2017-08-14 15:59 GMT

ಬೆಂಗಳೂರು, ಆ.14: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಸರಕಾರ ಕಾರ್ಮಿಕ ಕಾಯ್ದೆಗಳನ್ನು ಮೊಟಕುಗೊಳಿಸುವ ಮೂಲಕ ಕಾರ್ಮಿಕರ ಸಂವಿಧಾನಾತ್ಮಕ ಹಕ್ಕುಗಳನ್ನು ನಾಶ ಮಾಡಲು ಮುಂದಾಗಿದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದ್ದಾರೆ.

ಸೋಮವಾರ ನಗರದ ಪುರಭವನದ ಎದುರು ಸಿಐಟಿಯು ವತಿಯಿಂದ ಆಯೋಜಿಸಿದ್ದ ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ಹಾಗೂ ಸಮೃದ್ಧ, ಸಮಗ್ರ, ಸೌಹಾರ್ದ ಕರ್ನಾಟಕಕ್ಕಾಗಿ ಸ್ವಾತಂತ್ರೋತ್ಸವ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ ಬಂದು 7 ದಶಕಗಳು ಕಳೆಯುತ್ತಿದ್ದರೂ, ಇಂದಿಗೂ ಕಾರ್ಮಿಕರು ಸಮಾನವಾಗಿ ಬದುಕುವಂತಹ ವಾತಾವರಣ ನಿರ್ಮಾಣವಾಗಿಲ್ಲ. ಬದಲಿಗೆ ಕಾರ್ಮಿಕರನ್ನು ಇನ್ನಷ್ಟು ಶೋಷಣೆಗೆ ಒಳಪಡಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. 70 ವರ್ಷಗಳಲ್ಲಿ ಆಡಳಿತ ನಡೆಸಿದ ಎಲ್ಲ ಸರಕಾರಗಳು ಕಾರ್ಪೊರೇಟ್‌ಗಳನ್ನು, ಬಂಡವಾಳಶಾಹಿಗಳನ್ನು ನಮ್ಮ ದೇಶಕ್ಕೆ ಕರೆತರುವ ಪ್ರಯತ್ನಗಳು ನಡೆಸಿವೆ ಎಂದು ಹೇಳಿದರು.
ದೇಶದಲ್ಲಿ ಕಾರ್ಪೋರೇಟ್‌ಗಳಿಗೆ ನೈತಿಕ ಬೆಂಬಲ ನೀಡುವಂತಹ ಪಕ್ಷಗಳು ಬಹುತೇಕ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿವೆ. ಕಾರ್ಮಿಕರ ಪರವಾದ ಅನೇಕ ಕಾನೂನು, ಕಾಯ್ದೆಗಳಿದ್ದರೂ ಜಾರಿ ಮಾಡುತ್ತಿಲ್ಲ. ಅಲ್ಲದೆ, ಇತ್ತೀಚಿಗೆ ಕೇಂದ್ರ ಸರಕಾರ ಕಾರ್ಮಿಕರ ಪರವಾದ ಸುಮಾರು 47 ಕಾಯ್ದೆಗಳನ್ನು ಮೊಟಕುಗೊಳಿಸಿ 5 ಕಾಯ್ದೆಗಳನ್ನು ಮಾಡಿ ಸಂಸತ್ತಿನಲ್ಲಿ ಮಂಡಿಸಲು ಕರಡು ಪ್ರತಿಯನ್ನು ತಯಾರಿಸಿದೆ ಎಂದರು.

ಕಾರ್ಪೋರೇಟ್ ಕಂಪೆನಿಗಳ, ಬಂಡವಾಳಶಾಹಿಗಳ ಪರವಾದ ಕಾರ್ಮಿಕ ನೀತಿಗಳನ್ನು ಜಾರಿ ಮಾಡುವ ಸಲುವಾಗಿ, ಕಾರ್ಮಿಕ ಕಾಯ್ದೆಗಳನ್ನು ಮೊಟಕುಗೊಳಿಸಲಾಗುತ್ತಿದೆ. ಸಂವಿಧಾನಾತ್ಮಕವಾಗಿ ಕಾರ್ಮಿಕರಿಗೆ ಹಲವಾರು ಹಕ್ಕುಗಳನ್ನು ನೀಡಿದ್ದರೂ, ಅದನ್ನು ನಾಶ ಮಾಡಲು ಆಳುತ್ತಿರುವ ಸರಕಾರಗಳು ಮುಂದಾಗಿವೆ. ಸಂಸತ್ತಿನಲ್ಲಿರುವ ಶೇ.95 ರಷ್ಟು ಜನಪ್ರತಿನಿಧಿಗಳು ಸಂವಿಧಾನದ ಮೂಲಭೂತ ಆಶಯಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.

ನಮ್ಮ ದೇಶ ಸ್ವತಂತ್ರ ಗಳಿಸಿ ಎಪ್ಪತ್ತು ವರ್ಷಗಳಾಗುತ್ತಿದೆ. ಆದರೆ, ಇಂದಿಗೂ ಶೇ. 40 ಕ್ಕಿಂತ ಅಧಿಕ ಪ್ರಮಾಣದ ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ, ಉದ್ಯೋಗ ಸೃಷ್ಟಿ ಮಾಡಬೇಕಾದ ಸರಕಾರಗಳು ಬಂಡವಾಳಶಾಹಿಗಳ ಗೊಡ್ಡು ಬೆದರಿಕೆಗಳಿಗೆ ಮಣಿದು ಕಾರ್ಪೋರೇಟ್ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದ್ದಾರೆ. ನಮಗೆ ಬೇಕಾಗಿರುವುದು ವೆುೀಕ್ ಇನ್ ಇಂಡಿಯಾ ಅಲ್ಲ. ಜೀವನ ನಡೆಸಲು ಅಗತ್ಯವಿರುವಷ್ಟು ಜೀವನದ ಭದ್ರತೆ ಎಂದು ಪ್ರತಿಪಾದಿಸಿದರು.

ಹೀಗಾಗಿ, ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳು ಸ್ವಾತಂತ್ರದ ಆಶಯಗಳನ್ನು, ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಜನಪರವಾದ, ರೈತ, ಕೃಷಿ, ಕೂಲಿ ಕಾರ್ಮಿಕರ ಪರವಾದ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು 70 ನೆ ಸ್ವಾತಂತ್ರ ದಿನದಂದು ಪ್ರಮಾಣ ಮಾಡಿ, ಅದರಂತೆ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೆಪಿಆರ್‌ಎಸ್‌ನ ಅಧ್ಯಕ್ಷ ಜಿ.ಸಿ.ಬಯ್ಯರೆಡ್ಡಿ, ಲೇಖಕಿ ಡಾ.ವಿಜಯಮ್ಮ, ಕೂಲಿ ಕಾರ್ಮಿಕ ಸಂಘಟನೆ ಮುಖಂಡ ನಿತ್ಯಾನಂದಸ್ವಾಮಿ, ಸಿಐಟಿಯು ಮುಖಂಡ ಕೆ.ಎನ್.ಉವೆುೀಶ್, ಕೆ.ಎಸ್.ಸುಬ್ರಮಣ್ಯಂ, ಪ್ರತಾಪಸಿಂಹ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹಾಗೂ ನಗರದ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News