ಸಿದ್ದರಾಮಯ್ಯಗೆ ಭ್ರಷ್ಟಾಚಾರ ಆರೋಪ ಪದಕ ಇದ್ದಂತೆ: ಅಮಿತ್ ಶಾ ವ್ಯಂಗ್ಯ

Update: 2017-08-14 16:13 GMT

ಬೆಂಗಳೂರು, ಆ.14: ರಾಜ್ಯ ಸರಕಾರ, ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ, ಆರೋಪಗಳೆಲ್ಲ ಜೇಬಿಗೆ ಹಾಕಿಕೊಳ್ಳುವ ಪದಕಗಳಂತೆ ಭಾವಿಸಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ಮೂರು ದಿನಗಳ ರಾಜ್ಯ ಬಿಜೆಪಿ ನಾಯಕರ ಜತೆಗಿನ ಭೇಟಿ ಬಳಿಕ ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸರಕಾರ ಆರೋಪ ಬಂದಾಗ ತಲೆ ತಗ್ಗಿಸುತ್ತದೆ. ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾದ ಬಳಿಕ ಅವರು ತಮ್ಮ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಡಲಿಲ್ಲ. ಗುಜರಾತ್ ಶಾಸಕರನ್ನು ರೆಸಾರ್ಟ್‌ನಲ್ಲಿಟ್ಟ ಬಗ್ಗೆ ಸಿದ್ದರಾಮಯ್ಯ ಸರಕಾರ ಉತ್ತರ ಕೊಡಲಿ ಎಂದು ಹೇಳಿದರು.

ಕೇಂದ್ರದ ಮೋದಿ ಸರಕಾರ ಏನು ಮಾಡಿದೆ ಎಂದು ಕೇಳುವ ಸಿದ್ದರಾಮಯ್ಯ ಅವರು, ಬಡವರು, ರೈತರು, ದಲಿತರಿಗೆ ಕೇಂದ್ರ ಸರಕಾರ ಕೊಡುತ್ತಿರುವ ಕೋಟ್ಯಂತರ ರೂಪಾಯಿ ಅನುದಾನ ಎಲ್ಲಿ ಹೋಗುತ್ತಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ ಅವರು, ಹಿಂದಿನ ಯುಪಿಎ ಸರಕಾರ ಕೂಡಾ ಭ್ರಷ್ಟಾಚಾರದಲ್ಲೇ ಮುಳುಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ ಎಂದು ಅಮಿತ್ ಶಾ ನುಡಿದರು.

 ನನ್ನ ಮೂರು ದಿನಗಳ ಸಂಘಟನಾ ಪ್ರವಾಸ ಇವತ್ತಿಗೆ ಮುಗಿದಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಮೂರು ವರ್ಷ ತುಂಬಿದೆ. ಆದರೆ, ಒಂದೇ ಒಂದು ಭ್ರಷ್ಟಾಚಾರದ ಕಳಂಕ ನಮ್ಮ ಸರಕಾರಕ್ಕೆ ಅಂಟಿಲ್ಲ. ನಮ್ಮದು ನಿರ್ಣಾಯಕ ಆಡಳಿತ ಕೊಡುತ್ತಿರುವ ಸರಕಾರ ಎಂದ ಅವರು, ಸರ್ಜಿಕಲ್ ಸ್ಟ್ರೈಕ್ ಮೂಲಕ ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದೇವೆ. ವಿಶ್ವಮಟ್ಟದಲ್ಲಿ ಇಸ್ರೋ ಇನ್ನಷ್ಟು ಅಭಿವೃದ್ಧಿಯಾಗಿದೆ. ಉಪಗ್ರಹ ಉಡಾವಣೆ ಮೂಲಕ ಇತರ ದೇಶಗಳಿಗೆ ಮಾದರಿಯಾಗಿದೆ ಎಂದರು.

ಚುನಾವಣೆಗಾಗಿ: ರಾಜ್ಯ ಸರಕಾರ ಏಕಾಏಕಿ ಲಿಂಗಾಯತ ಪ್ರತ್ಯೇಕ ಧರ್ಮ, ನಾಡಧ್ವಜ ವಿವಾದ ಹುಟ್ಟು ಹಾಕಿರುವುದು ಕೇವಲ ಚುನಾವಣೆಗಾಗಿ. ಈ ಮೊದಲು ಏಕೆ ಈ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಲು ರಾಜ್ಯ ಸರಕಾರ ಮುಂದಾಗಿಲ್ಲ. ಇದೆಲ್ಲಾ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್‌ಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಸೇರಿ ಪ್ರಮುಖರು ಹಾಜರಿದ್ದರು.

ಭಯ ಬಿದ್ದ ಬಿಜೆಪಿ ನಾಯಕರು
ಅಮಿತ್ ಶಾ ಸುದ್ದಿಗೋಷ್ಟಿ ಮಧ್ಯೆ ಮೈಕ್‌ನಲ್ಲಿ ಜೋರಾಗಿ ಕೆಟ್ಟದಾಗಿ ಧ್ವನಿ ಬಂದಿತು. ಈ ವೇಳೆ ವೇದಿಕೆ ಮೇಲಿದ್ದ ಬಿಜೆಪಿ ನಾಯಕರು ಭಯಗೊಂಡರು. ಸ್ವಲ್ಪ ಕಾಲದ ಬಳಿಕ ಮತ್ತೆ ಮೈಕ್ ಸರಿಯಾದ ಕಾರಣ ಎಲ್ಲರೂ ನಿಟ್ಟುಸಿರು ಬಿಟ್ಟರು.

ಅಮಿತ್ ಶಾ ಸವಾಲು
ಹಿಂದುಳಿದ ಆಯೋಗಕ್ಕೆ ಸಂವಿಧಾನದತ್ತ ಅಧಿಕಾರ ಕಲ್ಪಿಸುವ ವಿಧೇಯಕ ರಾಜ್ಯ ಸಭೆಯಲ್ಲಿ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾಂಗ್ರೆಸ್ ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರೇ ಆದರೆ ಇದನ್ನು ಅಂಗೀಕರಿಸುವಂತೆ ಕಾಂಗ್ರೆಸ್‌ಗೆ ಹೇಳಲಿ ಎಂದು ಅಮಿತ್ ಶಾ ಸವಾಲು ಹಾಕಿದರು.

ರಾಜಕೀಯ ಪ್ರೇರಿತ ಕೊಲೆಗಳು
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ, ಆರೆಸ್ಸೆಸ್‌ನ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರ ಕೊಲೆಯಾಗಿದೆ. ಇವೆಲ್ಲವೂ ರಾಜಕೀಯ ಪ್ರೇರಿತವೇ ಆಗಿವೆ. ಅಲ್ಲದೆ, ಎಸ್‌ಡಿಪಿಐ ಮೇಲಿನ ಎಲ್ಲ ಮೊಕದ್ದಮೆಗಳನ್ನು ರಾಜ್ಯ ಸರಕಾರ ರದ್ದುಗೊಳಿಸಿ ರಾಜ್ಯದ ಜನರಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ ಎಂದು ಆಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News