ಗೋವಾ ರಾಜ್ಯದೊಂದಿಗೆ ಮಾತುಕತೆಗೆ ಸಿದ್ಧ: ಸಿದ್ದರಾಮಯ್ಯ

Update: 2017-08-14 16:17 GMT

ಬೆಂಗಳೂರು ಆ.14: ಒಂದು ರಾಜ್ಯದ ಚುನಾಯಿತ ಸರಕಾರ, ಮತ್ತೊಂದು ರಾಜ್ಯದ ಸರಕಾರದ ಜೊತೆ ಎರಡೂ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ. ಆ ನಿಟ್ಟಿನಲ್ಲಿ ಕಳಸಾ ಬಂಡೂರಿ ಸಮಸ್ಯೆ ಇತ್ಯರ್ಥಕ್ಕೆ ಗೋವಾ ರಾಜ್ಯದೊಂದಿಗೆ ಮಾತುಕತೆಗೆ ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಹದಾಯಿ ಸಮಸ್ಯೆ ಸಂಬಂಧ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷ ಮುಖಂಡರು ಪ್ರಸ್ತಾಪಿಸಿದಂತೆ ಮಹಾದಾಯಿ ನೀರಿನ ಸಮಸ್ಯೆ ಕುರಿತಂತೆ ಗೋವಾ ವಿಪಕ್ಷ ಮುಖಂಡರ ಜೊತೆ ಚರ್ಚಿಸುವೆ ಎಂದರು.

ನಾನು ಇತ್ತೀಚೆಗೆ ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಮಹಾದಾಯಿ ಹೋರಾಟ ಪ್ರಾರಂಭವಾಗಿ ಎರಡು ವರ್ಷ ಕಳೆದಿದೆ. ಮತ್ತೊಮ್ಮೆ ಸರ್ವಪಕ್ಷ ಮುಖಂಡರ ಸಭೆ ಕರೆದು ಒಂದು ತೀರ್ಮಾನಕ್ಕೆ ಬನ್ನಿ ಎಂದು ಧರಣಿ ನಿರತ ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ ಎಂದರು.
ಮಹಾದಾಯಿ ನದಿ ನೀರಿನ ಸಮಸ್ಯೆ ಕುರಿತಂತೆ ನ್ಯಾಯಮಂಡಳಿಯಲ್ಲಿ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮುಂದಿನ ಆದೇಶದ ಬಗ್ಗೆ ರೈತರು ಆತಂಕದಲ್ಲಿದ್ದಾರೆ. ಹೀಗಾಗಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳಬೇಕಾಗಿದೆ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ಸಲಹೆ ನೀಡಿದ ಬಳಿಕ ನಾನು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಭೆಯನ್ನು ಕರ್ನಾಟಕವೇ ಆಯೋಜಿಸುತ್ತದೆ, ತಾವು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನಿಸಲಾಯಿತು. ಮಹಾರಾಷ್ಟ್ರ ರಾಜ್ಯದ ಸಿಎಂ ಒಪ್ಪಿದರು. ಆದರೆ, ಗೋವಾ ರಾಜ್ಯದ ಸಿಎಂ ಒಪ್ಪಲಿಲ್ಲ, ಪ್ರತ್ಯುತ್ತರವನ್ನು ಕಳುಹಿಸಲಿಲ್ಲ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಗೋವಾ ಮುಖ್ಯಮಂತ್ರಿ ಅವರಿಂದ ಉತ್ತರ ಬಾರದಿದ್ದಾಗ ದೂರವಾಣಿ ಮೂಲಕ ಮಾತಾಡೋಣ ಎಂದು ಕರೆ ಮಾಡಿದರೂ, ಕರೆ ಸ್ವೀಕರಿಸಿರಲಿಲ್ಲ. ಇತ್ತೀಚೆಗೆ ಗೋವಾ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ, ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಗೋವಾದಲ್ಲಿ ಆ.28ಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಮುಗಿದ ಬಳಿಕ ಈ ವಿಚಾರವಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆಂದು ವಿವರಿಸಿದರು.

ಮಹಾದಾಯಿ ನದಿ ನೀರಿನ ವಿಷಯ ಸಂಬಂಧ ವಿಪಕ್ಷ ಬಿಜೆಪಿ ಮುಖಂಡರು ಉಪ ಚುನಾವಣೆ ಬಳಿಕ ಗೋವಾಗೆ ತೆರಳಿ ಅಲ್ಲಿನ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ. ನಂತರ ನಾನು ಆ ರಾಜ್ಯದ ವಿಪಕ್ಷ ಮುಖಂಡರೊಂದಿಗೆ ಮಾತನಾಡುತ್ತೇನೆ ಎಂದರು.

ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪನೇತೃತ್ವದಲ್ಲಿ ರಾಜ್ಯದ ವಿಪಕ್ಷ ನಾಯಕರು, ಲೋಕಸಭಾ ಸದಸ್ಯರು, ಆ ಭಾಗದ ಜನಪ್ರತಿನಿಧಿಗಳು ಗೋವಾ ರಾಜ್ಯದ ಸಿಎಂ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಾಜ್ಯ ಸರಕಾರ, ಆ ರಾಜ್ಯದ ವಿಪಕ್ಷದವರ ಮನವೋಲಿಸಲಿ ಎಂದು ಸಲಹೆ ಮಾಡಿದರು.

ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ರೇವಣ್ಣ, ಸಚಿವರಾದ ಎಚ್. ಕೆ.ಪಾಟೀಲ್, ಜಯಚಂದ್ರ, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕರಾದ ಕೋನರೆಡ್ಡಿ, ಕೆ.ಎಸ್.ಪುಟ್ಟಣ್ಣಯ್ಯ, ಸಂಸದರಾದ ಗದ್ಧಿಗೌಡರ್, ಪ್ರಹ್ಲಾದ ಜೋಶಿ, ಪ್ರಕಾಶ್ ಹುಕ್ಕೇರಿ, ಎಸ್.ಆರ್.ಪಾಟೀಲ್ ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News