ನಂದಗಡದಲ್ಲಿ ರಾಯಣ್ಣನ ಸೈನಿಕ ಶಾಲೆ: ಸಿದ್ದರಾಮಯ್ಯ

Update: 2017-08-15 13:43 GMT

 ಬೆಂಗಳೂರು, ಆ.15: ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಹೆಸರು ಚಿರಸ್ಥಾಯಿಯಾಗಿ ಉಳಿಯಲೆಂದು ಬೆಳಗಾವಿಯ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ಪ್ರಾರಂಭಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ರಾಯಣ್ಣರವರ 220ನೆ ಜಯಂತ್ಯುತ್ಸವದ ಅಂಗವಾಗಿ ನಗರದ ದೇವರಾಜ ಅರಸು ವೃತ್ತದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನಂದಗಡದಲ್ಲಿ 265 ಕೋಟಿ ರೂ. ವೆಚ್ಚದ ‘ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ’ ಪ್ರಾರಂಭಿಸುತ್ತಿದ್ದು, ಇದಕ್ಕೆ 100 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದರು.

ಜನ್ಮಸ್ಥಳ ಹಾಗೂ ವೀರಭೂಮಿ ಪ್ರಾಧಿಕಾರ ರಚಿಸಿ, ಮ್ಯೂಸಿಯಂ ಸೇರಿದಂತೆ ಜನ್ಮಸ್ಥಳ ಮತ್ತು ವೀರಭೂಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತ್ತಿದೆ. ರಾಯಣ್ಣ ವೀರ, ಶೂರ ಅಷ್ಟೇ ಅಲ್ಲ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದು, ಕಿತ್ತೂರಿನ ವಿಮೋಚನೆಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ದೇಶಪ್ರೇಮಿ. ಬ್ರಿಟಿಷರ ವಿರುದ್ಧ ಗ್ರಾಮೀಣ ಜನರನ್ನು ಒಗ್ಗೂಡಿಸಿ ರಣಕಹಳೆ ಮೊಳಗಿಸಿದ ಮಹಾನ್ ಸ್ವಾತಂತ್ರ ಹೋರಾಟಗಾರ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಟಿಪ್ಪು ಸುಲ್ತಾನ್, ಕಿತ್ತೂರ್ ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ, ಅಹಲ್ಯ ಬಾಯಿ ಸೇರಿದಂತೆ ಹಲವರು ಸ್ವಾತಂತ್ರ ಬರುವುದಕ್ಕಿಂತ ಮುಂಚೆಯೇ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದರು. ಇವರುಗಳ ಬಲಿದಾನ, ತ್ಯಾಗ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಬೇಕು. ಭಾರತೀಯ ಮಣ್ಣಿನಲ್ಲಿ ಹುಟ್ಟಿದ ನಾವು ಇಲ್ಲಿನ ನೆಲ, ಜಲ ಸಂರಕ್ಷಿಸಿದಾಗ ಮಾತ್ರ ಭಾರತೀಯರೆಂದು ಹೇಳಿಕೊಳ್ಳಲು ಸಾಧ್ಯ. ಅಲ್ಲದೆ, ರಾಯಣ್ಣ ಹಾಕಿಕೊಟ್ಟಿಂತಹ ದೇಶಪ್ರೇಮದ ಹಾದಿಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಸಲಹೆ ನೀಡಿದರು.

ರಾಯಣ್ಣ ಹೆಸರು: ನಗರದ ಆನಂದ್‌ರಾವ್ ವೃತ್ತದ ಮೇಲ್ಸೇತುವೆಗೆ ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಮಾಡಿರುವ ಮನವಿಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದೆಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕಿತ್ತೂರು ರಾಣಿ ಚೆನ್ನಮ್ಮನ ಆಸ್ಥಾನದಲ್ಲಿದ್ದ ಮಲ್ಲಪ್ಪಶೆಟ್ಟಿ, ಟಿಪ್ಪುಸುಲ್ತಾನ್ ಆಸ್ಥಾನದಲ್ಲಿದ್ದ ಮೀರ್‌ಸಾದಿಕ್‌ರಂತಹ ದೇಶದ್ರೋಹಿಗಳ ಸಹಾಯದಿಂದ ಬ್ರಿಟಿಷರು 200 ವರ್ಷಗಳ ಕಾಲ ಭಾರತವನ್ನು ಆಳ್ವಿಕೆ ಮಾಡಿದರು. ಅಲ್ಲದೆ, ಬ್ರಿಟಿಷರಿಗೆ ದೇಶದ್ರೋಹಿಗಳ ಸಹಾಯವಿಲ್ಲದಿದ್ದರೆ ಸಂಗೊಳ್ಳಿರಾಯಣ್ಣನನ್ನು ಸೆರೆ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ನುಡಿದರು.

ಮನವಿ: ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆ ಮಾಡಲು ಕೋರಲಾಯಿತು. ಇದೇ ವೇಳೆ, ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಸಲಹೆ ಮಾಡಿದರು.

ಈ ವೇಳೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಶಾಸಕ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಆರ್.ಕೃಷ್ಣಪ್ಪ, ಪಾಲಿಕೆ ಸದಸ್ಯ ಎಂ.ನಾಗರಾಜು, ಕೆಪಿಸಿಸಿ ಉಪಾಧ್ಯಕ್ಷೆ ಡಾ.ನಾಗಲಕ್ಷ್ಮೀ, ಪ್ರತಿಷ್ಠಾನದ ಅಧ್ಯಕ್ಷ ಸಂಗೊಳ್ಳಿ ಕೃಷ್ಣಮೂರ್ತಿ ಸೇರಿ ಪ್ರಮುಖರು ಹಾಜರಿದ್ದರು.

‘ಜನ್ಮ ದಿನಾಂಕ ಗೊತ್ತಿಲ್ಲ’

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ವರ್ಷ ಬಾಳಲಿ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಶುಭ ಹಾರೈಸಿದರು. ಇದಕ್ಕೆ, ಉತ್ತರಿಸಿದ ಸಿದ್ದರಾಮಯ್ಯ, ನನ್ನ ಜನ್ಮ ದಿನ ಸ್ಪಷ್ಟವಾಗಿ ಗೊತ್ತಿಲ್ಲ. ನನ್ನ ಸ್ನೇಹಿತರು ಶಾಲೆ ದಾಖಲಾತಿ ನೋಡಿ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಅಲ್ಲದೆ, ನಾನು ನೇರವಾಗಿ ಐದನೇ ತರಗತಿ ಸೇರಿದ್ದು, ಒಂದರಿಂದ ನಾಲ್ಕನೆ ತರಗತಿ ಓದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News