ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳೆ ಮಾರ್ಗದರ್ಶನ: ಬಿ.ಎ.ಬಸವರಾಜ

Update: 2017-08-15 13:47 GMT

ಬೆಂಗಳೂರು, ಆ.15: ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಭವಿಷ್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಹೋರಾಟಗಾರರ ಆದರ್ಶಗಳೆ ನಮಗೆ ಮಾರ್ಗದರ್ಶನವಾಗಿದೆ ಎಂದು ಶಾಸಕ ಹಾಗೂ ಬಿಡಿಎ ಸದಸ್ಯ ಬಿ.ಎ.ಬಸವರಾಜ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಕೆ.ಆರ್.ಪುರದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ 71ನೆ ಸ್ವಾತಂತ್ರ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

    ರಾಷ್ಟ್ರಪಿತ ಮಹಾತ್ಮಗಾಂಧಿ, ಪಂಡಿತ್ ಜವಾಹರ್‌ಲಾಲ್ ನೆಹರು, ವೌಲಾನ ಅಬುಲ್‌ಕಲಾಂ ಆಝಾದ್, ಭಗತ್‌ಸಿಂಗ್, ಸುಭಾಷ್‌ಚಂದ್ರಬೋಸ್ ಸೇರಿದಂತೆ ಅನೇಕ ಮಹನೀಯರು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ್ದಾರೆ. ಕಳೆದ 70 ವರ್ಷಗಳಲ್ಲಿ ದೇಶವು ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಬಡವರ ಹಸಿವು ನೀಗಿಸಲು ಅನ್ನಭಾಗ್ಯ, ಶಾಲಾ ಮಕ್ಕಳಲ್ಲಿನ ಅಪೌಷ್ಠಿಕತೆ ದೂರ ಮಾಡಲು ಕ್ಷೀರಭಾಗ್ಯ, ವಿದ್ಯಾಸಿರಿ, ಮನಸ್ವಿನಿ, ಮೈತ್ರಿ, ಕ್ಷೀರಧಾರೆ, ಕೃಷಿ ಭಾಗ್ಯ, ವಸತಿ ಭಾಗ್ಯ, ವಾಸಿಸುವವನೆ ಮನೆಯೊಡೆಯ ಸೇರಿದಂತೆ ಅನೇಕ ಕಾರ್ಯಕ್ರಮಗಳು, ಯೋಜನೆಗಳನ್ನು ನೀಡಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರದ ಬಡವರು, ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಒದಗಿಸಲು ನಾಳೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನೂರಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳಿಸಲಾಗುತ್ತಿದೆ. ಇದರಿಂದಾಗಿ, ಪ್ರತಿ ದಿನ ಸುಮಾರು 2 ಲಕ್ಷ ಜನರಿಗೆ ಅನುಕೂಲವಾಗುತ್ತದೆ ಎಂದು ಬಸವರಾಜ ಹೇಳಿದರು.

ಕೆ.ಆರ್.ಪುರ ಪ್ರಥಮ ದರ್ಜೆ ಕಾಲೇಜನ್ನು 50 ಲಕ್ಷರೂ.ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. 3.50 ಕೋಟಿ ರೂ.ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲಾಗಿದ್ದು, ಶೀಘ್ರವೆ ಲೋಕಾರ್ಪಣೆಗೊಳ್ಳಲಿದೆ. ಪಿಯುಸಿ ಹಾಗೂ ಪ್ರೌಢಶಾಲೆಯ ನವೀಕರಣ್ಕಕೆ 1 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

63 ಕೋಟಿ ರೂ.ವೆಚ್ಚದಲ್ಲಿ ಪೊಲೀಸ್ ವಸತಿ ಗೃಹಗಳ ನಿರ್ಮಾಣ, 2.50 ಕೋಟಿ ರೂ.ವೆಚ್ಚದಲ್ಲಿ ಸಂಚಾರಿ ಪೊಲೀಸ್ ಠಾಣೆ ನಿರ್ಮಾಣ, ಇಡೀ ಕ್ಷೇತ್ರದಲ್ಲಿ ಎಲ್ಇಡಿ ಬಲ್ಬ್ಗಳ ಅಳವಡಿಕೆ, ಪ್ರಥಮ ದರ್ಜೆ ಕಾಲೇಜು ಹಾಗೂ ಸರಕಾರಿ ಆಸ್ಪತ್ರೆ ಬಳಿ ಸಿಗ್ನಲ್ ಅಳವಡಿಸಲಾಗಿದೆ. 70 ಕೋಟಿ ರೂ.ವೆಚ್ಚದಲ್ಲಿ ಸಂತೆ ಮೈದಾನ ಅಭಿವೃದ್ಧಿಗೆ ಟೆಂಡರ್ ಕರೆಯಲಾಗುತ್ತಿದೆ ಎಂದು ಬಸವರಾಜ ಹೇಳಿದರು.

ಕೆ.ಆರ್.ಪುರಕ್ಕೆ ಸೇರಿದ ಸುಮಾರು 18 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಪ್ರತಿದಿನ ಸಾರ್ವಜನಿಕರು ಇಲ್ಲಿಂದ ಬೆಂಗಳೂರಿಗೆ ತೆರಳಬೇಕು. ಇನ್ನು ಮೂರು ತಿಂಗಳಲ್ಲಿ ತಾಲೂಕು ಕೇಂದ್ರವಾಗಿರುವ ಕೆ.ಆರ್.ಪುರದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ ಈಗಾಗಲೇ 600 ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಇನ್ನೂ 1 ಸಾವಿರ ಹಕ್ಕು ಪತ್ರಗಳನ್ನು ಶೀಘ್ರದಲ್ಲೆ ವಿತರಿಸಲಾಗುವುದು. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 80 ಲಕ್ಷ ರೂ.ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಿಸಲಾಗುವುದು. ಸರಕಾರಿ ಆಸ್ಪತ್ರೆಯಲ್ಲಿ 27 ಲಕ್ಷ ರೂ.ವೆಚ್ಚದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ನವೀಕರಣಗೊಳಿಸಲಾಗಿದೆ ಎಂದು ಬಸವರಾಜ ಹೇಳಿದರು.

1.25 ಕೋಟಿ ರೂ.ವೆಚ್ಚದಲ್ಲಿ ಬಿ.ನಾರಾಯಣ ಪುರ ರೈಲ್ವೆ ಅಂಡರ್ ಪಾಸ್ ನಿರ್ಮಾಣ, ಚನ್ನಸಂದ್ರ ಸಿಗ್ನಲ್ ಬಳಿ 17 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ, 21 ಕೋಟಿ ರೂ.ವೆಚ್ಚದಲ್ಲಿ ಹೊರಮಾವು ರೈಲ್ವೆ ಅಂಡರ್ ಪಾಸ್, 27 ಕೋಟಿ ರೂ.ವೆಚ್ಚದಲ್ಲಿ ಕಗ್ಗದಾಸಪುರ ರೈಲ್ವೆ ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ತೇಜಸ್‌ಕುಮಾರ್, ಬಿಬಿಎಂಪಿ ಜಂಟಿ ಆಯುಕ್ತೆ ವಾಸಂತಿ ಅಮರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಬಿಬಿಎಂಪಿ ಸದಸ್ಯರಾದ ಜಯಪ್ರಕಾಶ್, ಪಿ.ಜೆ. ಅಂತೋಣಿಸ್ವಾಮಿ, ಮುಖಂಡರಾದ ಎಲ್.ಮುನಿಸ್ವಾಮಿ, ಚಂದ್ರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News