ಹುತಾತ್ಮ, ಅಂಗವಿಕಲ ಯೋಧರ ಅವಲಂಬಿತರಿಗೆ ಸರಕಾರಿ ಉದ್ಯೋಗ: ಸಿಎಂ

Update: 2017-08-15 14:27 GMT

ಬೆಂಗಳೂರು, ಆ. 15: ಯುದ್ಧ ಅಥವಾ ಸೈನಿಕ ಕಾರ್ಯಾಚರಣೆಯಲ್ಲಿ ಮಡಿದ ಇಲ್ಲವೆ ಶಾಶ್ವತ ಅಂಗವಿಕಲರಾದ ರಾಜ್ಯದ ಯೋಧರ ಅವಲಂಬಿತರಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಂಗಳವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 71ನೆ ಸ್ವಾತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಕ್ಷಣಾ ತಂಡಗಳಿಂದ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದರು.

ಯುದ್ಧ ಅಥವಾ ಸೈನಿಕ ಕಾರ್ಯಾಚರಣೆಯಲ್ಲಿ ಮಡಿದ ಹಾಗೂ ಶಾಶ್ವತ ಅಂಗವಿಕಲರಾದ ರಾಜ್ಯದ ಯೋಧರ ಅವಲಂಬಿತ ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಲು ಸರಕಾರ ನಿರ್ಧರಿಸಿದೆ ಎಂದು ಹೇಳಿದರು.

ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಬಗೆಗಿನ ನಮ್ಮ ಕಾಳಜಿ ಕೇವಲ ಬಾಯಿ ಮಾತಿನದ್ದಲ್ಲ. ನಾವಿಂದು ಮನೆಯೊಳಗೆ ಸುರಕ್ಷಿತವಾಗಿ ನಿಶ್ಚಿಂತೆಯಿಂದ ಇರಲು ಕಾರಣ ಪ್ರಾಣ ಒತ್ತೆ ಇಟ್ಟು ಗಡಿಯಲ್ಲಿ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ ನಮ್ಮ ಹೆಮ್ಮೆಯ ಸೈನಿಕರನ್ನು ಸದಾ ಸ್ಮರಿಸೋಣ ಎಂದು ಹೇಳಿದರು.

ಪುನೀತ ಯಾತ್ರೆಗೆ ಚಾಲನೆ

ವಿವಿಧ ಧರ್ಮಗಳ ಪ್ರವಾಸಿಗರು ತಮ್ಮ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಲು ಅನುಕೂಲವಾಗಲು ಪುನೀತ ಯಾತ್ರೆ ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಈ ಯೋಜನೆಯ ಅಡಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಬಸ್‌ಗಳಲ್ಲಿ ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ಸಿಗಲಿದೆ. ಪ್ರವಾಸೋದ್ಯಮ ಇಲಾಖೆಯ ಸಮಗ್ರ ಮಾಹಿತಿಯನ್ನು ಪ್ರವಾಸಿಗರಿಗೆ ಒದಗಿಸಲು ಸಮಗ್ರ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಅ.2ಕ್ಕೆ ಮಾತೃಪೂರ್ಣ ಯೋಜನೆ ವಿಸ್ತರಣೆ

 ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಮಾತೃಪೂರ್ಣ ಯೋಜನೆಯನ್ನು ಮಹಾತ್ಮ ಗಾಂಧಿಯವರ 150ನೆ ಜಯಂತಿ ಅಂಗವಾಗಿ ಅ.2ರಂದು ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ವಿಸ್ತರಿಸಲಾಗುವುದು. ಒಟ್ಟು 12 ಲಕ್ಷ ಮಂದಿ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಿಎಂ ಭಾಷಣದ ಇತರೆ ಪ್ರಮುಖ ಅಂಶಗಳು

-2018ರ ವೇಳೆಗೆ 6,000 ಗ್ರಾಮಪಂಚಾಯಿತಿಗಳಿಗೆ ವೈ-ಫೈ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಚಿಂತಿಸಿದೆ. ಈ ವರ್ಷಾಂತ್ಯದೊಳಗೆ 2,500 ಗ್ರಾ.ಪಂ.ಗಳಿಗೆ ವೈಫೈ ಕಲ್ಪಿಸಲಾಗುವುವುದು.

-ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ನ.23-24 ರಂದು ವರ್ತಕರ ಅಭಿವೃದ್ಧಿ ಮೇಳ ಹಾಗೂ ಬಂಡವಾಳ ಹೂಡಿಕೆದಾರರ ಶೃಂಗಸಭೆ ಆಯೋಜನೆ

-2022ರ ವೇಳೆಗೆ 250 ಕಿ.ಮೀ ವರೆಗೆ ಮೆಟ್ರೋ ಕಾರ್ಯಾಚರಣೆ

-ರಾಜ್ಯದಲ್ಲಿ ಉನ್ನತ ಶಿಕ್ಷಣ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ‘ಜ್ಞಾನನಗರ’ ಸ್ಥಾಪನೆ

-ರಾಜ್ಯದಲ್ಲಿ ಎರಡು ಕ್ರೀಡಾ ವಿಜ್ಞಾನ ಕೇಂದ್ರದ ಜೊತೆಗೆ ಬೆಳಗಾವಿ, ಮೈಸೂರು, ಬೆಂಗಳೂರು ಮತ್ತು ಉಡುಪಿಗಳಲ್ಲಿ ತಲಾ ಎರಡು ಕೋಟಿ ರೂಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಕೇಂದ್ರಗಳ ಸ್ಥಾಪನೆ.

-ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಶೀಘ್ರ ಅನುಷ್ಠಾನಕ್ಕಾಗಿ ಹೊಸ ನಿಗಮ ಸ್ಥಾಪನೆ

ಧರ್ಮದ್ರೋಹ

 ‘ಧರ್ಮ ವೈಯಕ್ತಿಕವಾದದ್ದು. ಅದನ್ನು ವ್ಯಕ್ತಿ, ಸಮುದಾಯ ಮತ್ತು ಕೋಮುಗಳ ನಡುವೆ ಸೃಷ್ಟಿಸಿ, ರಾಜಕೀಯ ಲಾಭ ಪಡೆಯುವ ಸಾಧನಗಳಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ. ಇಂತಹ ಕೃತ್ಯಗಳಲ್ಲಿ ತೊಡಗಿರುವ ದೇಶದ್ರೋಹಿ ವಿರೋಧಿಗಳ ಹುನ್ನಾರಗಳನ್ನು ವಿಫಲಗೊಳಿಸಲು ಪ್ರತಿಯೊಬ್ಬರು ಪಣ ತೊಡಬೇಕು’.

  -ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News