ಇಂದಿರಾ ಕ್ಯಾಂಟಿನ್: ನಾಳೆ ರಾಹುಲ್ ಗಾಂಧಿ ಉದ್ಘಾಟನೆ

Update: 2017-08-15 14:06 GMT

ಬೆಂಗಳೂರು, ಆ. 15: ಅಗ್ಗದ ದರದಲ್ಲಿ ಬಡವರು ಹಾಗೂ ಜನ ಸಾಮಾನ್ಯರಿಗೆ ಉಪಾಹಾರ, ಮದ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವ ರಾಜ್ಯ ಸರಕಾರ ಮಹಾತ್ವಕಾಂಕ್ಷೆಯ ‘ಇಂದಿರಾ ಕ್ಯಾಂಟಿನ್’ ಯೋಜನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಳೆ(ಆ.16) ಚಾಲನೆ ನೀಡಲಿದ್ದಾರೆ.

ರಾಜ್ಯ ಸರಕಾರ ಹಾಗೂ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಜಂಟಿ ಆಶ್ರಯದಲ್ಲಿ ರೂಪಿಸಿರುವ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿನ ಚಿಕ್ಕಪೇಟೆ ಕ್ಷೇತ್ರದ ಜಯನಗರ ವಾರ್ಡ್‌ನ ಕನಕನಪಾಳ್ಯ ಮುಖರಸ್ತೆಯಲ್ಲಿನ ಇಂದಿರಾ ಕ್ಯಾಂಟಿನ್‌ನ್ನು ರಾಹುಲ್ ಗಾಂಧಿ ಬೆಳಗ್ಗೆ 11:30ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ.

ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್ ಸ್ಥಾಪಿಸಲಾಗುವುದು ಎಂದು ಘೋಷಿಸಿತ್ತು. ಆ ಪೈಕಿ ಕಾಮಗಾರಿ ಪೂರ್ಣಗೊಂಡ 101 ಕ್ಯಾಂಟಿನ್‌ಗಳನ್ನು ನಾಳೆ ಬೆಳಗ್ಗೆಯಿಂದಲೇ ಏಕಕಾಲಕ್ಕೆ ಕಾರ್ಯಾರಂಭ ಮಾಡಲಿವೆ. ಪ್ರತಿ ಕ್ಯಾಂಟಿನ್‌ಗೆ 28.5 ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ.

ಕ್ಯಾಂಟೀನ್‌ನಲ್ಲಿ ಗುಣಮಟ್ಟ, ಶುಚಿತ್ವಕ್ಕೆ ಒತ್ತು ನೀಡಲಾಗಿದ್ದು, ಇಂದಿರಾ ಕ್ಯಾಂಟೀನ್‌ಗಾಗಿ ಹೊಸ ಆಪ್‌ನ್ನು ಸಿದ್ಧಪಡಿಸಲಾಗಿದ್ದು, ಈ ಆಪ್ ಮೂಲಕ ಹತ್ತಿರದ 5 ಕ್ಯಾಂಟೀನ್‌ಗಳ ಬಗ್ಗೆ ಮಾಹಿತಿ, ಆ ದಿನದ ಉಪಾಹಾರ, ಊಟದ ವಿವರ ಇರಲಿದ್ದು, ದೂರುಗಳಿದ್ದರೂ ಆಪ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಕ್ಯಾಂಟೀನ್‌ನಲ್ಲಿ 5 ರೂ.ಗಳಿಗೆ ಉಪಾಹಾರ, 10 ರೂ.ಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲು ದರ ನಿಗದಿಯಾಗಿದೆ. ಪ್ರತಿ ಕ್ಯಾಂಟೀನ್‌ನಲ್ಲೂ ಎಷ್ಟು ಊಟ ಲಭ್ಯವಿದೆ ಎಂಬ ಬಗ್ಗೆ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಅಳವಡಿಸಲಾಗಿದ್ದು, ಜತೆಗೆ ಪ್ರತಿ ಕ್ಯಾಂಟೀನ್‌ಗೂ ಆರೋಗ್ಯಾಧಿಕಾರಿ ಇರಲಿದ್ದು, ಕಾಲ ಕಾಲಕ್ಕೆ ಆಹಾರ ಸುರಕ್ಷತೆಯ ತಪಾಸಣೆಯೂ ನಡೆಯಲಿದೆ.

ನಾಳೆ ನಡೆಯಲಿರುವ ಕ್ಯಾಂಟಿನ್ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಲಿದ್ದಾರೆ.

ಇಂದಿರಾ ಕ್ಯಾಂಟಿನ್‌ನಲ್ಲಿ ಬೆಳಗಿನ ಉಪಾಹಾರ 5ರೂ., ಊಟ 10 ರೂ.ಗಳು. ಬೆಳಗ್ಗೆ 7.30 ರಿಂದ 10.30ರ ವರೆಗೆ ಉಪಾಹಾರ, ಮಧ್ಯಾಹ್ನ 12.30 ರಿಂದ 2.30ರ ವರೆಗೆ ಹಾಗೂ ರಾತ್ರಿ 7.30 ರಿಂದ 9.30ರ ವರೆಗೂ ಊಟ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News