ಮೂಲಭೂತ ಕರ್ತವ್ಯಗಳ ಬಗ್ಗೆ ಧ್ವನಿ ಎತ್ತದೆ ವೌನ ವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ: ಡಾ.ಮನು ಬಳಿಗಾರ್

Update: 2017-08-15 14:03 GMT

 ಬೆಂಗಳೂರು, ಆ.15: ಮನುಷ್ಯನ ಮೂಲಭೂತ ಕರ್ತವ್ಯಗಳ ವಿಚಾರದಲ್ಲಿ ಸ್ವಾತಂತ್ರ ಹಾಗೂ ಹಕ್ಕುಗಳಿಗಾಗಿ ಧ್ವನಿ ಎತ್ತುವವರು ವೌನ ವಹಿಸುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸ್ವಾತಂತ್ರ ದಿನಾಚರಣೆ ಅಂಗವಾಗಿ ನಗರದ ಪರಿಷತ್ತಿನ ಆವರಣದಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಪ್ರಜೆಗಳಾಗಿ ನಾವು ನಮ್ಮ ಮೇಲಿನ ಸಾಮಾಜಿಕ ಜವಾಬ್ದಾರಿಯನ್ನು ಇಂದು ಮರೆಯುತ್ತಿದ್ದೇವೆ. ಇನ್ನೊಬ್ಬರನ್ನು ಟೀಕೆ ಮಾಡುತ್ತ ಕುಳಿತುಕೊಳ್ಳುವ ಬದಲು ನಾವೇನು ಮಾಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ದೇಶಕ್ಕಾಗಿ ಸಾವಿರಾರು ಜನರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರನ್ನು ಆದರ್ಶವಾಗಿಸಿಕೊಂಡು ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿರಬೇಕು. ಅಲ್ಲದೆ, ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದವರ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಸಾಪ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಮಾತನಾಡಿ, ದೇಶದ ಗಡಿಯಲ್ಲಿ ನಮ್ಮ ಜನರು ನೆಮ್ಮದಿಯಾಗಿ ಇರಬೇಕು ಎಂದು ಸೈನಿಕರು ಮಳೆ-ಗಾಳಿ, ಚಳಿಯನ್ನು ಲೆಕ್ಕಿಸದೇ ದೇಶ ಸೇವೆ ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ಯಾರೂ ಲಘುವಾಗಿ ಮಾತನಾಡಬಾರದು. ಸೈನಿಕರನ್ನು ಗೌರವಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ರಾಷ್ಟ್ರೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಅದರ ಜೊತೆಗೆ ನಮ್ಮ ಸ್ಥಳೀಯ ಇತಿಹಾಸವನ್ನು ಅರಿತುಕೊಳ್ಳಬೇಕು. ರಾಣಿ ಚೆನ್ನಮ್ಮ, ಅಬ್ಬಕ್ಕ, ಒನಕೆ ಓಬವ್ವ ಸೇರಿದಂತೆ ಅನೇಕ ಮಹಿಳೆಯರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಅವರಿಗೂ ಸಮಾನವಾದ ಗೌರವ ಸಿಗಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News