ಸ್ವಾತಂತ್ರೋತ್ಸವ ಆಚರಣೆಗೆ ಮಾತ್ರ ಸೀಮಿತವಾಗಬಾರದು: ದೊರೆಸ್ವಾಮಿ

Update: 2017-08-15 14:07 GMT

ಬೆಂಗಳೂರು, ಆ.15: ಸ್ವಾತಂತ್ರ ದಿನಾಚರಣೆ ಆಚರಣೆಗೆ, ನೆಪಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಭಿಪ್ರಾಯಿಸಿದ್ದಾರೆ.

ನಗರದ ಕಸಾಪದಲ್ಲಿ ಜನ್ಮಭೂಮಿ ರಕ್ಷಣಾ ಪಡೆ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮನ್ನಾಳುತ್ತಿರುವ ಸರಕಾರಗಳು ಕೇವಲ ನೆಪ ಮಾತ್ರಕ್ಕೆ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿವೆ. ಆದರೆ, ವಾಸ್ತವವಾಗಿ ನಿಜವಾದ ಸ್ವಾತಂತ್ರ ಯಾರಿಗೆ ಸಿಕ್ಕಿದೆ ಎಂಬುದನ್ನು ಆಲೋಚಿಸಬೇಕಿದೆ ಎಂದು ಹೇಳಿದರು.

ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ ಸುಮ್ಮನೆ ಸಿಗಲಿಲ್ಲ. ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ತ್ಯಾಗ, ಬಲಿದಾನದಿಂದ ಸಿಕ್ಕಿದ ಸ್ವಾತಂತ್ರಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ಬ್ರಿಟಿಷರಿಂದ ಸ್ವಾತಂತ್ರ ಸಿಕ್ಕಿದರೂ, ಸ್ವದೇಶಿಯರಿಂದ ಇಂದಿಗೂ ಬಿಡುಗಡೆ ಸಿಕ್ಕಿಲ್ಲ. ಇಂದಿಗೂ ಗುಲಾಮಗಿರಿ, ಶೋಷಣೆ, ಬಡತನ, ನಿರುದ್ಯೋಗ ನಿವಾರಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ಸ್ವತಂತ್ರ ಪಡೆದ ನಂತರ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಇಂದಿನ ಪ್ರಜಾಪ್ರಭುತ್ವದ ಆಯ್ಕೆ ಪ್ರಕ್ರಿಯೆ ಜಾತಿ, ಹಣದ ಮೇಲೆ ನಿಂತಿದೆ. 70-80ರ ದಶಕದಲ್ಲಿ ದೇಶದ ಬಗ್ಗೆ ಗೌರವ ಇದ್ದವರನ್ನು ಮಾತ್ರ ಚುನಾವಣೆಗೆ ನಿಲ್ಲಿಸಿ ಆಯ್ಕೆ ಮಾಡಲಾಗುತ್ತಿತ್ತು. ಅವರಿಗೆ ಒಂದು ನಯಾ ಪೈಸೆ ನೀಡುತ್ತಿರಲಿಲ್ಲ, ಅವರೂ ಸಹ ಪಡೆಯುತ್ತಿರಲಿಲ್ಲ.

ಆದರೆ, ಇಂದಿನ ದಿನಗಳಲ್ಲಿ ಭ್ರಷ್ಟರನ್ನು, ಭೂ ಮಾಲಕರನ್ನು, ಉಳ್ಳವರನ್ನು ಹಾಸಿಗೆ ಹಾಸಿ ಸ್ವಾಗತ ಮಾಡಿ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸುತ್ತಿದ್ದೇವೆ. ಸಾಮಾನ್ಯ ವ್ಯಕ್ತಿಯೊಬ್ಬ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲ. ಅಂದರೆ, 70 ವರ್ಷಗಳಲ್ಲಿ ನಮಗೆ ಸಿಕ್ಕಿದ ಸ್ವಾತಂತ್ರ ಎತ್ತ ಸಾಗುತ್ತಿದೆ ಎಂದ ಅವರು, ದೇಶದಲ್ಲಿ ನ್ಯಾಯಯುತವಾಗಿ ದುಡಿಯುವವರಿಗೆ ಮಾನ್ಯತೆಯಿಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 ಸ್ವತಂತ್ರ ಭಾರತದ, ಸಂವಿಧಾನದ ಆಶಯಗಳು ಪರಿಪೂರ್ಣವಾಗಬೇಕಾದರೆ ಗ್ರಾಮ ಪಂಚಾಯಿತಿ ಮಟ್ಟದಿಂದ ಆರಂಭವಾಗಿ ಸಂಸತ್ತಿನವರೆಗೂ ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಸಾಮಾನ್ಯ ಜನರ ಸಮಸ್ಯೆ ಆಲಿಸುವವರು ಆಯ್ಕೆ ಆಗಬೇಕು. ಈಗಿರುವ ಹಣ, ಜಾತಿ, ಧರ್ಮದ ಆಧಾರಿತ ಆಯ್ಕೆ ನಿರ್ಮೂಲನೆಯಾಗವೇಕು. ಆ ಮೂಲಕ ಬಡವರ, ಹಿಂದುಳಿದ, ಅಲ್ಪಸಂಖ್ಯಾತರ ಧ್ವನಿಯಾಗಬೇಕು. ಆಗ ಮಾತ್ರ ಸಂವಿಧಾನದ, ಸ್ವಾತಂತ್ರ ಆಶಯಗಳು ಈಡೇರಲು ಸಾಧ್ಯವಾಗುತ್ತದೆ. ಸ್ವಾತಂತ್ರಕ್ಕಾಗಿ ಹೋರಾಡಿದವರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಶೇ.30ರಷ್ಟು ಜನರು ದಿನದಲ್ಲಿ ಊಟ, ಮಲಗಲು ಸೂರಿಲ್ಲದ ಜನರಿದ್ದಾರೆ. ಸರಕಾರಗಳು ಇವರೆಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು. ಕಟ್ಟಕಡೆಯ ವ್ಯಕ್ತಿಗೂ ಎಲ್ಲ ರೀತಿಯ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ ಸರಕಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬ ಪ್ರಜೆಯೂ ದೇಶ ರಕ್ಷಕರಾಗಿ ಬದುಕಬೇಕು. ಈ ನಿಟ್ಟಿನಲ್ಲಿ ಯುವ ಜನರು ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, 71ನೇ ಸ್ವಾತಂತ್ರ್ಯ ಕಾಲಘಟ್ಟಕ್ಕೆ ಬರಬೇಕಾದರೆ ಕೆಟ್ಟ ಸಂದರ್ಭಗಳನ್ನು ಹೆದರಿಸಿದ್ದೇವೆ. ನರ ಬಲಿ, ದೇವದಾಸಿ ಪದ್ಧತಿಗಳನ್ನು ಕಾಲಕಾಲಕ್ಕೆ ಮಹಾನೀಯರ ಹೋರಾಟಗಳಿಂದ ಅವುಗಳನ್ನು ನಿಗ್ರಹಿಸುತ್ತ ಬರುತ್ತಿದ್ದೇವೆ. ಹಕ್ಕುಗಳು ಸಿಕ್ಕಿವೆ ಅವುಗಳನ್ನು ಚಲಾಯಿಸುವ ಕರ್ತವ್ಯದ ಅರಿವು ಇನ್ನೂ ಬಂದಿಲ್ಲ. ಈ ದೇಶ ಸಜ್ಜನರ ದೇಶವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ನಟ ಭಾಸ್ಕರ್, ಜನ್ಮಭೂಮಿ ರಕ್ಷಣಾ ಪಡೆ ರಾಜ್ಯಾಧ್ಯಕ್ಷ ಎನ್.ಸತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News