‘ಸೂಪರ್ ಪವರ್’ ಆಗದಿದ್ದರೂ ಪರವಾಗಿಲ್ಲ ಸಹಬಾಳ್ವೆ ಉಳಿಯಬೇಕು: ದಿನೇಶ್ ಕುಮಾರ್

Update: 2017-08-15 14:44 GMT

ಬೆಂಗಳೂರು, ಆ. 15: ‘ನಾವು ಜಗತ್ತಿನ ಸೂಪರ್ ಪವರ್ ಆಗದೇ ಇದ್ದರೂ ಪರವಾಗಿಲ್ಲ. ಸೌಹಾರ್ದತೆ-ಸಹಬಾಳ್ವೆ ಉಳಿಯಬೇಕು, ಪರಸ್ಪರರ ಮೇಲಿನ ನಂಬುಗೆ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ನಡಿಗೆ ಸಾಗಬೇಕು’ ಎಂದು ಪತ್ರಕರ್ತ ಎಸ್.ಸಿ.ದಿನೇಶ್ ಕುಮಾರ್ ಕರೆ ನೀಡಿದ್ದಾರೆ.

ಮಂಗಳವಾರ ಇಲ್ಲಿನ ಮತ್ತಿಕೆರೆಯ ಮಸ್ಜಿದ್ ಎ ತಾಹಾದಲ್ಲಿ ಏರ್ಪಡಿಸಿದ್ದ ಸ್ವಾತಂತ್ತ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಮುಂದೆ ಇಂದು ಎರಡು ಬಗೆಯ ರಾಷ್ಟ್ರೀಯತೆಯ ಆಯ್ಕೆ ಇದೆ. ಒಂದು ಗೋಳ್ವಾಲ್ಕರ್ ಹೇಳುವ ಬಂಚ್ ಆಫ್ ಥಾಟ್ಸ್‌ನ ರಾಷ್ಟ್ರೀಯತೆ, ಮತ್ತೊಂದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಕೊಟ್ಟ ರಾಷ್ಟ್ರೀಯತೆ. ಇದರಲ್ಲಿ ನಮ್ಮ ಆಯ್ಕೆ ಅಂಬೇಡ್ಕರ್ ರಾಷ್ಟ್ರೀಯತೆಯೇ ಆಗಿರಬೇಕು. ಅದರಿಂದ ಮಾತ್ರ ಈ ದೇಶವನ್ನು ಉಳಿಸಲು ಸಾಧ್ಯ ಎಂದರು.

ಭಾರತ ದೇಶ ಮಾತ್ರವಲ್ಲ, ಇಡೀ ಜಗತ್ತೆ ಬಲಪಂಥೀಯರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಎಲ್ಲರ ದೊಡ್ಡಣ್ಣನಾಗಿ ಅಮೆರಿಕದಲ್ಲಿ ಟ್ರಂಪ್ ಬಂದು ಕುಳಿತಿದ್ದಾನೆ. ಇತ್ತ ನಮ್ಮ ದೇಶದಲ್ಲಿ ನಾಗರಿಕರು ಉಣ್ಣುವ ತಟ್ಟೆಯಲ್ಲಿ ಏನಿದೆಯೆಂದು ನೋಡಲಾಗುತ್ತಿದೆ. ಒಂದು ದೊಡ್ಡ ಸಮುದಾಯವನ್ನು ಅನುಮಾನಿಸಿ, ಅಪಮಾನಿಸಿ ಮೂಲೆಗೆ ತಳ್ಳುವುದರ ಅಪಾಯ ಏನೆಂಬುದು ಇವರಿಗೆ ಅರ್ಥವಾಗುತ್ತಿಲ್ಲ. ಇದೆಲ್ಲದರ ನಡುವೆಯೂ ನಾವು ಈ ದೇಶವನ್ನು ಉಳಿಸಿಕೊಳ್ಳಬೇಕಿದೆ. ಇದು ಎಲ್ಲರ ನಾಡು. ಯಾರೂ ಇಲ್ಲಿ ಎರಡನೆ ದರ್ಜೆ ಪ್ರಜೆಗಳಲ್ಲ ಎಂದರು.

ಇವತ್ತು ಜೋರಾಗಿ ಮಳೆ ಸುರೀತಾ ಇದೆ. ನನ್ನ ಕಣ್ಣ ಮುಂದೆ ಗೋರಖ್‌ಪುರದಲ್ಲಿ ಸತ್ತ 70ಕ್ಕೂ ಹೆಚ್ಚು ಹಸುಗೂಸುಗಳ ಮುಗ್ಧ ಮುಖವೆ ಒಂದೊಂದಾಗಿ ಸರಿದು ಹೋದಂತೆ ಅನಿಸುತ್ತಿದೆ. ನಾವಿಲ್ಲಿ ಸ್ವಾತಂತ್ರ್ಯ ಪಡೆದು 70ನೇ ವರ್ಷದ ಸಂಭ್ರಮ ಆಚರಿಸುತ್ತಿದ್ದೇವೆ. ಈ ಧೋ ಎನ್ನುವ ಮಳೆ ಯಾರ ಕಣ್ಣೀರು? ಆ ಕಂದಮ್ಮಗಳ ತಾಯಿಯಂದಿರದಾ? ಆ ಮಕ್ಕಳನ್ನು ನಾವೇ ಕೊಂದುಬಿಟ್ಟೆವಲ್ಲವೇ? ಈ ಕರುಳು ಹಿಂಡುವ ವಿಷಾದದ ನಡುವೆಯೇ ನಾನು ಧ್ವಜಾರೋಹಣ ನೆರವೇರಿಸಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸ್ವಾತಂತ್ರ್ಯೋತ್ಸವ ನನಗೆ ತುಂಬ ಮಹತ್ವದ್ದಾಗಿ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ದೇಶಭಕ್ತಿಯನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ. ನಿಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಿ ಎಂಬ ಒತ್ತಡವನ್ನು ನಿರ್ಮಿಸಲಾಗುತ್ತಿದೆ. ಆದರೆ ಈ ಮಸೀದಿ ಇಂಥ ಒತ್ತಡಗಳು ಇಲ್ಲದೆ ಇದ್ದಾಗಲೂ ಅಂದರೆ 20ಕ್ಕೂ ಹೆಚ್ಚು ವರ್ಷಗಳಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತ ಬಂದಿದೆ. ನೀವು ಯಾರೂ ತೋರಿಕೆಗೆ, ಪ್ರದರ್ಶನಕ್ಕೆ ಇದನ್ನು ಆಚರಿಸುತ್ತಿಲ್ಲ ಅಥವಾ ಇನ್ಯಾರದೋ ಅಪ್ಪಣೆಗೆ, ಆದೇಶಕ್ಕೆ ಒಳಗಾಗಿ ಇದನ್ನು ಮಾಡುತ್ತಿಲ್ಲ. ನಿಮ್ಮ ಹೃದಯದಿಂದ ಆಚರಿಸುತ್ತಿದ್ದೀರಿ ಎಂದು ಶ್ಲಾಘಿಸಿದರು.
 
ಹಾಗೆ ನೋಡಿದರೆ ನೀವು ಮಾಡುತ್ತಿರುವ ಈ ಸ್ವಾತಂತ್ರ್ಯೋತ್ಸವ, ಈ ಕಟಿಬದ್ಧತೆ, ದೇಶಪ್ರೇಮ ಹೊಸದೇನೂ ಅಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮುಸ್ಲಿಮರು ಬಲಿದಾನ ಮಾಡಿದ್ದಾರೆ. ಲಕ್ಷಾಂತರ ಮಂದಿ ದೇಶಕ್ಕಾಗಿ ಹೋರಾಡಿದ್ದಾರೆ. ಮುಸ್ಲಿಮರು ಈ ನೆಲವನ್ನು ಹಿಂದೆಯೂ ಪ್ರೀತಿಸುತ್ತಾರೆ, ಈಗಲೂ ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದು ಒಂದು ಸಾಕ್ಷಿ ಅಷ್ಟೇ ಎಂದು ಹೇಳಿದರು. ಈ ಮಸ್ಜಿದ್ ಪಕ್ಕದಲ್ಲಿರುವ ಶಾಮ್ ಪ್ರಸಾದ್ ಮುಖರ್ಜಿ ಮೇಲ್ಸೇತುವೆಯ ನಾಮಫಲಕ ಈಗಷ್ಟೆ ಗಮನಿಸಿದೆ. ಅವರು ಇದಕ್ಕೆ ಕೇವಲ ಮುಖರ್ಜಿಯವರ ಹೆಸರನ್ನು ಮಾತ್ರ ಇಟ್ಟಿಲ್ಲ. ಅವರ ಪ್ರಸಿದ್ಧ ಘೋಷಣೆಯನ್ನೂ ಬರೆದಿದ್ದಾರೆ. ‘ಏಕ್ ದೇಶ್, ದೋ ವಿಧಾನ್, ದೋ ಪ್ರಧಾನ್ ನಹೀಂ ಚಲೇಂಗೇ ನಹೀ ಚಲೇಂಗೇ’ ಈ ಘೋಷಣೆ ಕೇಳೋದಕ್ಕೆ ಚೆನ್ನಾಗಿದೆ. ಆದರೆ ದೇಶದ ಬಹುತ್ವದ ವಿರೋಧಿ ಘೋಷಣೆ ಇದು.

ಎಲ್ಲದರಲ್ಲೂ ಏಕತ್ವ ತರುವುದು ಈ ವಿಚಾರಧಾರೆಯ ಉದ್ದೇಶ. ಇದನ್ನೇ ಹಲವರು ಹಿಂದಿ, ಹಿಂದೂ, ಹಿಂದೂಸ್ತಾನ್ ಎನ್ನುತ್ತಾರೆ. ನಾವು ಈ ತರ್ಕವನ್ನ ತಿರಸ್ಕರಿಸಬೇಕು. ದೇಶದ ಸೌಂದರ್ಯ ಇರೋದೇ ಬಹುತ್ವದಲ್ಲಿ. ಹಲವು ರಾಜ್ಯಗಳು, ಹಲವು ಧರ್ಮಗಳು, ಹಲವು ಸಂಸ್ಕೃತಿ, ಹಲವು ಭಾಷೆಗಳು. ಈ ಹಲವುಗಳು ಇದ್ದರೇನೇ ದೇಶ ಒಂದಾಗಿ ಇರಲು ಸಾಧ್ಯ. ಏಕ್ ದೇಶ್, ಬಹುವಿಧಾನ್, ಬಹುಪ್ರಧಾನ್ ಆಗದೇ ಹೋದರೆ ಈ ದೇಶ ಮಹಾನ್ ಆಗಲು ಸಾಧ್ಯವಿಲ್ಲ.

 ಆ ಭಾಗದ ಮೇಲ್ಸೇತುವೆಗೆ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿಟ್ಟು ಏಕಾತ್ಮದ ಘೋಷಣೆ ಬರೆಯಲಾಗಿದೆ. ಏಕಾತ್ಮಗೊಳ್ಳುವುದು ಎಂದರೆ ಎಲ್ಲವೂ ತಮ್ಮ ಅಸ್ತಿತ್ವ ಕಾದಿಟ್ಟುಕೊಂಡೆ ಒಂದಾಗಿರುವುದು ಎಂಬ ಅರ್ಥ ಹೇಳಬೇಕು. ಆದರೆ, ಇಲ್ಲಿ ಹಾಗಾಗುತ್ತಿಲ್ಲ. ದೇಶವನ್ನು ಇಂದು ಧರ್ಮದ ಹೆಸರಿನಲ್ಲಿ ಒಡೆಯಲಾಗುತ್ತಿದೆ. ಬಹುತ್ವವನ್ನು ನಾಶಪಡಿಸುವ ಕೆಲಸಗಳು ಮೇಲಿಂದ ಮೇಲೆ ನಡೆಯುತ್ತಿವೆ ಎಂದು ಟೀಕಿಸಿದರು.

ಮಳೆಯ ನಡುವೆಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯ. ಇಷ್ಟು ಸೊಗಸಾಗಿ ಕಾರ್ಯಕ್ರಮ ಆಯೋಜಿಸಿದ ಗೆಳೆಯ ಸಮೀಉಲ್ಲಾ ಖಾನ್ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು ಎಂದು ದಿನೇಶ್ ಕುಮಾರ್ ಹೇಳಿದರು.

ಕರ್ನಾಟಕ ಮಸ್ಜೀದ್ ಕೌನ್ಸಿಲ್ ಅಧ್ಯಕ್ಷ ಅಲಿ ಮಹಮದ್ ಸಮೀಉಲ್ಲಾ ಅಧ್ಯಕ್ಷತೆ ವಹಿಸಿದ್ದು, ಮಸ್ಜಿದ್ ಎ-ತಾಹಾ ಅಧ್ಯಕ್ಷ ಹಾರೂನ್ ರಶೀದ್, ಮಾಜಿ ಅಧ್ಯಕ್ಷ ಝೈನುಲ್ ಅಬಿದೀನ್, ಪ್ರಧಾನ ಕಾರ್ಯದರ್ಶಿ ಷಹಜಹಾನ್, ಅಬ್ದುಲ್ ಕಲಾಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ನಜೀರ್, ಕಾಂಗ್ರೆಸ್ ಮುಖಂಡೆ ಸುನಂದಮ್ಮ, ಸೋಮಣ್ಣ, ಎನ್.ರಾಜ, ದಸ್ತಗಿರ್, ಮುನಾಫ್, ನಯಾಜ್, ಮಹಮದೀಯರ ಕನ್ನಡ ವೇದಿಕೆ ರಾಜ್ಯಾಧ್ಯಕ್ಷ ಸಮೀ ಉಲ್ಲಾಖಾನ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News