ಶಿವಕುಮಾರ್ ವಿರುದ್ಧ ಪ್ರತಿಭಟನೆ ದಿಢೀರ್ ನಿರ್ಧಾರವಲ್ಲ: ಶೋಭಾ ಕರಂದ್ಲಾಜೆ

Update: 2017-08-15 14:21 GMT

ಬೆಂಗಳೂರು, ಆ. 15: ಆದಾಯ ತೆರಿಗೆ ಇಲಾಖೆ(ಐಟಿ) ದಾಳಿಗೆ ಒಳಗಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪ್ರತಿಭಟನೆ ದಿಢೀರ್ ನಿರ್ಧಾರ ಅಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ತನಿಖಾ ಸಂದರ್ಭದಲ್ಲಿ ಪ್ರತಿಭಟನೆ ಬೇಡ ಎಂದು ಸುಮ್ಮನಿದ್ದೆವು. ತನಿಖೆಯಲ್ಲಿ ಅವರು ತಪ್ಪಿತಸ್ಥ ಎಂಬುದು ಗೊತ್ತಾಗುತ್ತಿದ್ದಂತೆ ಪ್ರತಿಭಟನೆಗೆ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ: ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ರೂಪಿಸಿರುವ ರಣತಂತ್ರದಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷ ಅನುಕೂಲವಾಗಲಿದ್ದು, ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

2018ರ ಚುನಾವಣೆಯಲ್ಲಿ ಅಧಿಕ ಸ್ಥಾನ ಗೆಲ್ಲುವ ಸಂಕಲ್ಪಮಾಡಿದ್ದೇವೆ. ಉತ್ತರಪ್ರದೇಶ ಚುನಾವಣೆಯ ನಂತರ ಅಮಿತ್ ಶಾ ಅವರ ಕಣ್ಣು ಕರ್ನಾಟಕ ರಾಜ್ಯದ ಮೇಲೆ ಬಿದ್ದಿದೆ. ಅವರು ಇಲ್ಲಿಯೇ ಇದ್ದು, ಚುನಾವಣಾ ರಣತಂತ್ರ ಹೆಣೆಯಲ್ಲಿದ್ದಾರೆ ಎಂದರು.

ಕರ್ನಾಟಕದ ಗೆಲುವಿನ ನಂತರ ಪಕ್ಕದ ತಮಿಳುನಾಡು, ಕೇರಳದಲ್ಲಿ ಬಿಜೆಪಿ ಸಂಘಟನೆಯತ್ತ ರಾಷ್ಟ್ರೀಯಾಧ್ಯಕ್ಷರು ಗಮನಹರಿಸಲಿದ್ದಾರೆ ಎಂದ ಅವರು, ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಭೇಟಿ ಸಂದರ್ಭದಲ್ಲಿ ನೀಡಿರುವ ಸಲಹೆ-ಸೂಚನೆಗಳನ್ನು ಎಲ್ಲರೂ ಪಾಲಿಸಲಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮೇಲ್ಮನೆ ಸದಸ್ಯ ಲೆಹರ್ ಸಿಂಗ್, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News