ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಸಂಭ್ರಮಕ್ಕೆ ಮಳೆಯ ಅಡ್ಡಿ

Update: 2017-08-15 14:21 GMT

ಬೆಂಗಳೂರು, ಆ. 15: ಬೆಳ್ಳಂಬೆಳಗ್ಗೆ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಸುರಿದ ಧಾರಾಕಾರ ಮಳೆ, ಎಪ್ಪತ್ತೊಂದನೆ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಅಡ್ಡಿಯನ್ನುಂಟು ಮಾಡಿತು. ಮಾತ್ರವಲ್ಲ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ಕಾರು, ಬೈಕ್‌ಗಳು, ಬಿಎಂಟಿಸಿ ಬಸ್ಸುಗಳು ಸೇರಿದಂತೆ ಹಲವು ವಾಹನಗಳು ನೀರಲ್ಲಿ ಮುಳುಗಿವೆ. ಅಲ್ಲದೆ, ಮಳೆ ನೀರಿನೊಂದಿಗೆ ಚರಂಡಿಯ ಕೊಚ್ಚೆ ನೀರು ಮನೆ, ಕಚೇರಿಗಳಿಗೆ ನುಗ್ಗಿದ ಪರಿಣಾಮ ಜನರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಬೇಕಾಯಿತು.

ಕೆ.ಆರ್.ಪುರ, ಎಚ್.ಎಸ್.ಆರ್. ಲೇಔಟ್, ಕೋರಮಂಗಲ, ಸಿಲ್ಕ್‌ಬೋರ್ಡ್ ಜಂಕ್ಷನ್ ಸೇರಿದಂತೆ ನಗರದ ಹಲವು ರಸ್ತೆಗಳು ಜಲಾವೃತವಾಗಿವೆ. ಜನನಿಬಿಡ ಜೆ.ಸಿ.ರಸ್ತೆಯ ವಿಎಸ್‌ಐಎಲ್ ಬಿಲ್ಡಿಂಗ್ ನೆಲಮಹಡಿ ಜಲಾವೃತಗೊಂಡಿದೆ. ಕೋರಮಂಗಲದಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದೆ. ವರ್ತೂರು ರಸ್ತೆಯಲ್ಲೂ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ವಿವಿಧೆಡೆ ಮನೆಯ ಗೋಡೆಗಳು ಕಸಿದು ಬಿದ್ದಿವೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸರಕಾರಿ ಕಚೇರಿಗಳಿಗೆ ರಜೆ ಇದ್ದುದರಿಂದ ಹೆಚ್ಚಿನ ವಾಹನಗಳು ರಸ್ತೆಗಿಳಿಯಲಿಲ್ಲ. ಆದರೂ, ಸ್ವಾತಂತ್ರೋತ್ಸವ ಸಮಾರಂಭಕ್ಕೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಅಬ್ಬರದ ಮಳೆಯಿಂದ ಪರದಾಡಬೇಕಾಯಿತು.

ಸಚಿವರಿಗೆ ತರಾೆ: ನಗರದಲ್ಲಿ ದಿಢೀರ್ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನೀರು ನುಗ್ಗಿದ ತಗ್ಗು ಪ್ರದೇಶಗಳಿಗೆ ಮಧ್ಯಾಹ್ನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋರಮಂಗಲ, ಶಾಂತಿನಗರ, ಜೆ.ಪಿ.ನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜೆ.ಸಿ.ರಸ್ತೆಯಲ್ಲಿರುವ ನೀರು ಗಾಲುವೆಯಲ್ಲಿ ಮಳೆಯ ನೀರು ರಸ್ತೆಗೆ ಹರಿದಿರುವುದನ್ನು ಪರಿಶೀಲಿಸಿದ ಅವರು, ತಡೆಗೋಡೆ ಎತ್ತರಿಸಿ ಹೂಳು ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಳೆ ನೀರುಗಾಲುವೆ ಉಕ್ಕಿ ಹರಿದು ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವುದನ್ನು ಗಮನಿಸಿದ ಸಚಿವ ಜಾರ್ಜ್, ಮೇಯರ್ ಪದ್ಮಾವತಿ ಸೇರಿದಂತೆ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಕೆಸರು ಗದ್ದೆ

‘ಸ್ವಾತಂತ್ರೋತ್ಸವ ಸಮಾರಂಭಕ್ಕಾಗಿ ಸಜ್ಜುಗೊಂಡಿದ್ದ ನಗರದ ಮಾಣಿಕ್ ಶಾ ಪರೇಡ್ ಮೈದಾನ ಸೇರಿದಂತೆ ನಗರದ ಬಹುತೇಕ ಮೈದಾನಗಳು ಅಬ್ಬರದ ಮಳೆಯಿಂದ ಕೆಸರು ಗದ್ದೆಯಂತಾಗಿದ್ದು, ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೀವ್ರ ಅಡ್ಡಿಯುಂಟಾಯಿತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News