ರಾಜ್ಯದಲ್ಲಿ ಅಮಿತ್ ಶಾ ಆಟ ನಡೆಯಲ್ಲ: ಪರಮೇಶ್ವರ್

Update: 2017-08-15 14:59 GMT

 ಬೆಂಗಳೂರು, ಆ.15: ಉತ್ತರಪ್ರದೇಶ ಹಾಗೂ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಟ ನಡೆಯುವುದಿಲ್ಲ. ಅವರ ಹಿನ್ನೆಲೆ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪಾಲಿಗೆ ಅಮಿತ್ ಶಾ ಚಾಣಕ್ಯ ಅಲ್ಲ. ಸಿಬಿಐ ಕುಣಿಕೆಯಿಂದ ಅವರು ಹೇಗೆ ಹೊರ ಬಂದಿದ್ದಾರೆ ಅನ್ನೋದು ನಮಗೆಲ್ಲ ಗೊತ್ತಿದೆ ಎಂದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಕುರಿತು ನಾವು ಯಾವುದೆ ಮಾತುಗಳನ್ನಾಡುವುದಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಅವರು ಕೆಲಸ ಮಾಡುತ್ತಾರೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲಿ. ಆದರೆ, ಆದಾಯ ತೆರಿಗೆ ಇಲಾಖೆಯನ್ನು ಮುಂದಿಟ್ಟುಕೊಂಡು ನಮ್ಮ ಪಕ್ಷದ ಮುಖಂಡರನ್ನು ಟಾರ್ಗೆಟ್ ಮಾಡಿ, ರಾಜಕೀಯ ಮಾಡುವುದು ಸರಿಯಲ್ಲ ಎಂದು ಪರಮೇಶ್ವರ್ ಕಿಡಿಗಾರಿದರು.
ನಾವು ಅಭಿವೃದ್ಧಿಯ ವಿಚಾರ ಮಾತನಾಡಿದರೆ, ಬಿಜೆಪಿಯವರು ರಾಜಕೀಯ ಮಾತನಾಡುತ್ತಾರೆ. ನಾವು ಒಗ್ಗಟ್ಟಿನ ಮಂತ್ರ ಜಪಿಸಿದರೆ ಅವರು, ಕೋಮುವಾದದ ಬಗ್ಗೆ ಮಾತನಾಡುತ್ತಾರೆ. ಅಮಿತ್ ಶಾ ರಾಜ್ಯಕ್ಕೆ ಬಂದು, ನಮ್ಮ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಭ್ರಷ್ಟಾಚಾರದ ಅರ್ಥವನ್ನು ಅವರೇ ನಮಗೆ ಹೇಳಬೇಕು ಎಂದು ಪರಮೇಶ್ವರ್ ವ್ಯಂಗ್ಯವಾಡಿದರು.

ಬಿಜೆಪಿ ಅಧಿಕಾರವಧಿಯಲ್ಲಿ ರಾಜ್ಯದ ನೈಸರ್ಗಿಕ ಸಂಪತ್ತು ಅದಿರನ್ನು ಅಕ್ರಮವಾಗಿ ರಫ್ತು ಮಾಡಿ ಹಣ ಮಾಡಿದ್ದು, ಮುಖ್ಯಮಂತ್ರಿಯೊಬ್ಬರು ಚೆಕ್‌ರೂಪದಲ್ಲಿ ದೇಣಿಗೆ ಪಡೆದದ್ದು, ಭೂ ಅಕ್ರಮಗಳು ಸೇರಿದಂತೆ ಅವರ ಪಕ್ಷದ ಅನೇಕ ಮುಖಂಡರು ಹಲವಾರು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಆದುದರಿಂದ, ಭ್ರಷ್ಟಾಚಾರದ ಅರ್ಥ ಅಮಿತ್ ಶಾ ದೃಷ್ಟಿಯಲ್ಲಿ ಏನು ಎಂಬುದು ಗೊತ್ತಾಗಬೇಕಿದೆ ಎಂದು ಅವರು ತಿರುಗೇಟು ನೀಡಿದರು.

ಈ ಹಿಂದೆ ನಡೆದ ಕೆಲ ರಾಜ್ಯಗಳ ಚುನಾವಣೆಯಲ್ಲಿ ಅಮಿತ್ ಶಾ ಹಾಗೂ ಬಿಜೆಪಿಯವರು ಮತಯಂತ್ರಗಳನ್ನು ದುರುಪಯೋಗ ಪಡಿಸಿಕೊಂಡಿದ್ದು ಸಾಬೀತಾಗಿದೆ. ಆದರೆ, ಇಂತಹ ತಂತ್ರಗಾರಿಕೆ ನಮ್ಮ ರಾಜ್ಯದಲ್ಲಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು.
 ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಯಾವ ನಡುಕನೂ ಆಗಿಲ್ಲ, ಭಯವೂ ಆಗಿಲ್ಲ. ಬಿಜೆಪಿಯವರು ಭಯಗ್ರಸ್ತರಾಗಿದ್ದರಿಂದಲೆ ಅಮಿತ್ ಶಾ ಅವರನ್ನೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News