ಕೋಮುವಾದ ಹತ್ತಿಕ್ಕಲು ಕಾಂಗ್ರೆಸ್ ಯತ್ನ: ಡಾ.ಜಿ.ಪರಮೇಶ್ವರ್

Update: 2017-08-15 14:51 GMT

ಬೆಂಗಳೂರು, ಆ.15: ದೇಶದಲ್ಲಿನ ಕೆಲ ಶಕ್ತಿಗಳು ಕೋಮುವಾದವನ್ನು ಪ್ರಚೋದಿಸುತ್ತಿವೆ. ಆದರೆ, ಕಾಂಗ್ರೆಸ್ ಮಾತ್ರ ಅಂತಹ ಪ್ರಯತ್ನಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ 71ನೆ ಸ್ವಾಂತಂತ್ರ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ವಿಶ್ವದಲ್ಲೆ ಅತೀ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶ ನಮ್ಮದು. ಯುವ ಜನತೆಯ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ. ಸ್ವತಂತ್ರ ಭಾರತದ 70 ವರ್ಷಗಳಲ್ಲಿ ಅತಿಹೆಚ್ಚು ಅವಧಿಗೆ ಕಾಂಗ್ರೆಸ್ ದೇಶದ ಆಡಳಿತ ನಡೆಸಿದೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಪರಮೇಶ್ವರ್ ಹೇಳಿದರು.

ಸಾವಿರಾರು ಜೀವಗಳ ತ್ಯಾಗ ಮತ್ತು ಬಲಿದಾನದಿಂದಾಗಿ ಸುಮಾರು 200 ವರ್ಷಗಳ ಬ್ರಿಟಿಷರ ದಾಸ್ಯದಿಂದ ನಾವು ಮುಕ್ತರಾದೆವು. ನಮ್ಮ ಹಿರಿಯರ ಹೋರಾಟದಿಂದಾಗಿ ನಾವು ಸ್ವತಂತ್ರ ದೇಶದಲ್ಲಿ ಉಸಿರಾಡುವಂತಾಯಿತು ಎಂದು ಅವರು ತಿಳಿಸಿದರು. 

ಕಾಂಗ್ರೆಸ್ ಪಕ್ಷದ ಪರಿಶ್ರಮದಿಂದ ದೇಶಕ್ಕೆ ಸ್ವಾತಂತ್ರ ಸಿಕ್ಕಿತು. ಕಾಂಗ್ರೆಸ್ಸಿಗರಾಗಿ ನಾವು ಹೆಮ್ಮೆಪಡಬೇಕು. ಪ್ರಜಾಪ್ರಭುತ್ವ ರಕ್ಷಣೆಗೆ ನಡೆದ ಅವಿರತ ಹೋರಾಟಗಳ ಪರಿಣಾಮವಾಗಿ ದೇಶದಲ್ಲಿ ಸ್ವಾತಂತ್ರ ಉಳಿದಿದೆ. ಆಹಾರಕ್ಕಾಗಿ ಪರದಾಡುತ್ತಿದ್ದ ದೇಶ, ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಜನರ ಪಾತ್ರ ದೊಡ್ಡದು ಎಂದು ಪರಮೇಶ್ವರ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News