ಮಕ್ಕಳಿಗೆ ದೇಶದ ಇತಿಹಾಸ ಬೋಧಿಸುವುದು ಅಗತ್ಯ: ಮುಫ್ತಿ ನಾಝಿಮ್‌ ಶೇಖ್

Update: 2017-08-15 14:56 GMT

ಬೆಂಗಳೂರು, ಆ.15: ದೇಶದ ಸ್ವಾತಂತ್ರ ಹೋರಾಟಕ್ಕಾಗಿ ಮುಸ್ಲಿಮರು ಮಾಡಿರುವ ತ್ಯಾಗ, ಬಲಿದಾನದ ಇತಿಹಾಸವನ್ನು ಪೋಷಕರು ತಮ್ಮ ಮಕ್ಕಳಿಗೆ ಬೋಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕೌದೇನಹಳ್ಳಿ ಮಕ್ಕಾ ಮಸ್ಜಿದ್‌ನ ಖತೀಬ್ ಓ ಇಮಾಮ್ ಮುಫ್ತಿ ನಾಝಿಮ್‌ ಅಹ್ಮದ್‌ಶೇಖ್ ಕರೆ ನೀಡಿದ್ದಾರೆ.

ಮಂಗಳವಾರ ರಾಮಮೂರ್ತಿನಗರ ವಾರ್ಡ್‌ನ ಕೌದೇನಹಳ್ಳಿ ಈದ್ಗಾ ಮೈದಾನದಲ್ಲಿ ಮಕ್ಕಾ ಮಸ್ಜಿದ್ ಟ್ರಸ್ಟ್, ಟೀಂ ಸುಲ್ತಾನ್ ವತಿಯಿಂದ ಇಖ್ರಾ ದೀನಿಯಾತ್ ಮಖ್ತಬ್‌ನ ಮಕ್ಕಳೊಂದಿಗೆ ಆಯೋಜಿಸಲಾಗಿದ್ದ 71ನೆ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರಕ್ಕಾಗಿ ನಡೆದ ಹೋರಾಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಎಲ್ಲ ಸಮುದಾಯಗಳಂತೆ ಲಕ್ಷಾಂತರ ಮುಸ್ಲಿಮರು ಈ ಹೋರಾಟಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರ ದೇಶಭಕ್ತಿ, ಹೋರಾಟದ ಮನೋಭಾವದ ಕುರಿತು ಮಕ್ಕಳಿಗೆ ತಿಳಿಸಬೇಕಾಗಿದೆ ಎಂದು ಅವರು ಹೇಳಿದರು.

ಕೆಲವೇ ಕೆಲವು ಮಂದಿಯ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿಲ್ಲ. ಹಝ್ರತ್ ಟಿಪ್ಪುಸುಲ್ತಾನ್‌ರಿಂದ ಹಿಡಿದು ವೌಲಾನ ಅಬುಲ್ ಕಲಾಂ ಆಝಾದ್‌ವರೆಗೆ ಸಹಸ್ರಾರು ಮಹನೀಯರನ್ನು ನಾವು ಸ್ಮರಿಸಿಕೊಳ್ಳಬೇಕಿದೆ. ನಮ್ಮ ಇತಿಹಾಸವನ್ನು ನಮ್ಮ ಕಣ್ಣ ಮುಂದೆಯೆ ಮರೆಮಾಚಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದು ನಾಝಿಮ್ ಅಹ್ಮದ್ ಎಚ್ಚರಿಕೆ ನೀಡಿದರು.

ಇದಕ್ಕೂ ದೀನಿಯಾತ್ ಮಖ್ತಬ್‌ನ ಮಕ್ಕಳು ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳು, ಸಾಮಾಜಿಕ ಸಂದೇಶಗಳನ್ನು ಹೊತ್ತ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಕ್ಕಾ ಮಸ್ಜಿದ್ ಟ್ರಸ್ಟ್ ಅಧ್ಯಕ್ಷ ಶೇಖ್ ಅಬ್ದುಲ್ ಅಝೀಝ್, ಖಜಾಂಚಿ ಅಬ್ದುಲ್‌ರಶೀದ್‌ಪಠಾಣ್, ಸಂಘಟನಾ ಕಾರ್ಯದರ್ಶಿ ಮುನವ್ವರ್ ಬಾಷಾ, ಮಸ್ಜಿದ್ ನಿಮ್ರಾ ಕಾರ್ಯದರ್ಶಿ ಮೆಹಬೂಬ್ ಪಾಷ, ಇಖ್ರಾ ದೀನಿಯಾತ್ ಮಖ್ತಬ್‌ನ ಪ್ರಾಂಶುಪಾಲ ಮಹಬೂಬ್ ಬಾಷಾ, ಟೀಂ ಸುಲ್ತಾನ್ ಮುಖಂಡರಾದ ಅಮ್ಜದ್‌ಖಾನ್, ಮುಹಮ್ಮದ್ ಸುಹೇಲ್, ಚಾಂದ್‌ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News