ಬೆಳ್ಳಂದೂರು ಕೆರೆಯಲ್ಲಿ ಭಾರೀ ನೊರೆ: ಸುತ್ತ ಮುತ್ತಲ ಸಾರ್ವಜನಿಕರಿಗೆ ಆತಂಕ

Update: 2017-08-15 15:07 GMT

ಬೆಂಗಳೂರು, ಆ. 15: ಇಂದು ಬೆಳ್ಳಂ ಬೆಳಗ್ಗೆ ಸುರಿದ ಧಾರಾಕಾರ ಮಳೆ ನಗರದಲ್ಲಿ ಭಾರೀ ಅವಾಂತರವನ್ನೆ ಸೃಷ್ಟಿಸಿದ್ದು, ಇಲ್ಲಿನ ಬೆಳ್ಳಂದೂರು ಕೆರೆಯಲಿ ನೊರೆ ಹೆಚ್ಚಾಗಿದ್ದು ಕೆರೆಯ ತಟದಲ್ಲಿರುವ ದುಗ್ಗಲಮ್ಮ ದೇವಳ ಸಂಪೂರ್ಣ ಜಲಾವೃತವಾಗಿದೆ.

ಕೆಲ ದಿನಗಳಿಂದ ಬೆಳ್ಳಂದೂರು ಕೆರೆಯಲ್ಲಿ ನೊರೆ ಉತ್ಪತ್ತಿಯ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಮಳೆ ಇಲ್ಲದ ಕಾರಣ ನೊರೆ ಅಷ್ಟಾಗಿ ಕಾಣಿಸಿರಲಿಲ್ಲ. ಆದರೆ ಇಂದು ಬೆಳಗಿನಜಾವ ಸುರಿದ ಧಾರಾಕಾರ ಮಳೆಯಿಂದ ಕೆರೆಗೆ ನೀರಿನ ಪ್ರಮಾಣ ಹೆಚ್ಚಾಗಿ ನೊರೆಯ ಪ್ರಮಾಣ ಮಿತಿ ಮೀರಿದೆ.

ಇದರಿಂದ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಶಿ ರಾಶಿ ನೊರೆ ಆವೃತಗೊಂಡಿರುವುದರಿಂದ ನೀರು ಕಾಣದೆ ನೊರೆ ಪರ್ವತವೇ ಸೃಷ್ಟಿಯಾಗಿದ್ದು, ಆ ಭಾಗದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ಗಾಳಿ ಬಂದರೆ ವಾಹನ ಸವಾರರು ಮತ್ತು ಪಾದಚಾರಿಗಳ ಮೈಮೇಲೆ ಬೀಳುವ ನೊರೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಹಸಿರು ನ್ಯಾಯಾಧೀಕರಣ ಪೀಠ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದ್ದ ನಂತರ ಎಚ್ಚೆತ್ತುಕೊಂಡು ಕೆರೆಯ ಶುದ್ಧೀಕರಣಕ್ಕೆ ಮುಂದಾಗಿತ್ತು. ಆ ನಿಟ್ಟಿನಲ್ಲಿ ಕೆರೆಯ ತಟದಲ್ಲಿದ್ದ ಕೆಲ ಕಾರ್ಖಾನೆಗಳಿಗೆ ಬೀಗ ಹಾಕಲಾಗಿತ್ತು.

ಆದರೆ, ಕೆರೆಗೆ ಬಿಡುತ್ತಿರುವ ಕಲುಷಿತ ನೀರಿನ ಶುದ್ಧೀಕರಣ ಮಾಡದ ಹಿನ್ನೆಲೆಯಲ್ಲಿ ನೊರೆ ಸಮಸ್ಯೆ ಸೃಷ್ಟಿಯಾಗಿದ್ದು, ಇದೀಗ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಗಾಳಿಗೆ ನೊರೆ ತೇಲಾಡುತ್ತಾ ಸುತ್ತಮುತ್ತಲ ಮನೆಗಳಿಗೆ ಬರುವುದರಿಂದ ಆಗುವ ಅನಾಹುತ ಅಷ್ಟಿಷ್ಟಲ್ಲ. ಚರ್ಮದ ಕಾಯಿಲೆ, ಊರಿ ಊತ, ಕಣ್ಣಿನ ಸೋಂಕು ಸೇರಿದಂತೆ ಡೆಂಗ್ಯೂ ಮಲೇರಿಯಾದಂತ ಮಾರಣಾಂತಿಕ ಕಾಯಿಲೆಗಳ ಭೀತಿಯಲ್ಲಿ ಆ ಭಾಗದ ಜನರು ಬದುಕಬೇಕಾದ ದುಸ್ಥಿತಿ ಬಂದಿದೆ.

‘ನಗರದಲ್ಲಿ ಒಂದು ರಾತ್ರಿ ಸುರಿದ ಮಳೆಗೆ ಕೆರೆಯ ತಟದಲ್ಲಿರುವ ದುಗ್ಗಲಮ್ಮ ದೇವಳ ಪೂರ್ಣ ಜಲಾವೃತವಾಗಿದೆ. ಪ್ರತಿ ಮಳೆಗಾಲದಲ್ಲಿಯೂ ಈ ದೇವಾಲಯಕ್ಕೆ ಮಳೆ ನೀರು ನುಗ್ಗುವುದು ಸಹಜ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ, ಪ್ರಯೋಜನವಾಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ನೀರು ನುಗ್ಗುವುದನ್ನು ತಪ್ಪಿಸಿ, ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’

-ಯಮಲೂರು ವೆಂಕಟೇಶ್ ಸ್ಥಳೀಯ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News