ರಾಡಾರ್ ಸ್ಥಾಪನೆಗೆ ಭರದ ಸಿದ್ಧತೆ

Update: 2017-08-15 15:20 GMT

ಬೆಂಗಳೂರು, ಆ.15: ನಗರದ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ 40 ಅಡಿ ಎತ್ತರದ ರಡಾರ್ ಸ್ಥಾಪನೆಗೆ ಅಗತ್ಯವಾದ ಸಿದ್ಧತೆ ನಡೆದಿದೆ. ರಾಜ್ಯದಲ್ಲಿ ಮೋಡ ಬಿತ್ತನೆಗೆ ಕ್ಷಣಗಣನೆ ಆರಂಭವಾದ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆಡಳಿತ ಸಂಕೀರ್ಣವಾದ ನಾಯಕ್ ಭವನದ ಮೇಲೆ ರಾಡಾರ್ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ. ನೂರು ಅಡಿ ಎತ್ತರದ ಆರು ಮಹಡಿ ಆಡಳಿತ ಸಂಕೀರ್ಣದ ಮೇಲೆ ಇದನ್ನು ನಿರ್ಮಿಸಲಾಗುತ್ತಿದೆ.

ಈಗಾಗಲೇ ಸೋರಾಪುರದಲ್ಲಿ ರಾಡಾರ್ ಸ್ಥಾಪನೆ ಕಾರ್ಯ ಪೂರ್ಣಗೊಂಡಿದ್ದು, ಗದಗದಲ್ಲಿ ರಾಡಾರ್ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ರಾಡಾರ್ ಸ್ಥಾಪನೆಯ ಕಾರ್ಯ ಇಂದಿನಿಂದ ಪ್ರಾರಂಭವಾಗಲಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಅಲ್ಲದೆ, ಮೋಡ ಬಿತ್ತನೆಗೆ ಅಮೆರಿಕಾದಿಂದ ವಿಶೇಷವಾಗಿ ತರಿಸಲಾಗಿರುವ ವಿಮಾನ ಜಕ್ಕೂರು ಏರೋಡ್ರಂಗೆ ಬಂದು ತಲುಪಿದೆ. ಈ ವಿಮಾನದ ತಾಂತ್ರಿಕ ಪರಿಶೀಲನಾ ಕಾರ್ಯ ಪ್ರಾರಂಭಿಸಲಾಗಿದ್ದು, ವಿಮಾನವನ್ನು ಮೋಡ ಬಿತ್ತನೆಗೆ ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಮೋಡ ಬಿತ್ತನೆಯ ಕಾರ್ಯ ಆ.18 ರಂದು ಪ್ರಾರಂಭವಾಗುವ ನಿರೀಕ್ಷೆಯಿದ್ದು, ತಾಂತ್ರಿಕ ಕೆಲಸಗಳು ಭರದಿಂದ ಸಾಗುತ್ತಿವೆ. ಮಳೆಯ ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಮಾತ್ರ ಮೋಡ ಬಿತ್ತನೆಯ ಕಾರ್ಯವನ್ನು ಕೈಗೊಳ್ಳಲಾಗುವುದು. ಮೋಡ ಬಿತ್ತನೆಗೆ ಅಗತ್ಯವಿರುವ ಹಾಗೂ ಮಳೆಯ ಸಾಧ್ಯತೆಯನ್ನು ಹೊಂದಿರುವ ಮೋಡಗಳ ಲಭ್ಯತೆಯನ್ನು ಆಧರಿಸಿ ದೈನಂದಿನ ರಾಡಾರ್ ಚಿತ್ರಗಳು ಮತ್ತು ಸಂಕೇತಗಳ ಆಧಾರದ ಮೇಲೆ ಮೋಡ ಬಿತ್ತನೆ ಕೈಗೊಳ್ಳಲಾಗುತ್ತದೆ.

ಸೋರಾಪುರ, ಗದಗ ಹಾಗೂ ಬೆಂಗಳೂರಿನಲ್ಲಿ ರಾಡಾರ್ ಸ್ಥಾಪನೆಯ ಕಾರ್ಯ ಪೂರ್ಣಗೊಂಡ ನಂತರ ಮಳೆಯ ಸಾಂದ್ರತೆಯನ್ನು ಹೊಂದಿರುವ ಮೋಡಗಳ ನಿಖರ ಮಾಹಿತಿ ಲಭ್ಯವಾಗಲಿದೆ. ಈ ಮಾಹಿತಿಯನ್ನು ಆಧರಿಸಿ ಆಯಾ ಪ್ರದೇಶಗಳಲ್ಲಿ ಮೋಡ ಬಿತ್ತನೆಯ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News