ಒಲಿಂಪಿಕ್ಸ್ ಚಾಂಪಿಯನ್ ಮೊ. ಫರಾ ಇನ್ನು ಮೊಹಮ್ಮದ್

Update: 2017-08-16 05:31 GMT

ಲಂಡನ್, ಆ.16: ವೃತ್ತಿಜೀವನದಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಲಿರುವ ದೂರ ಅಂತರದ ಓಟಗಾರ ಸರ್ ಮೊ ಫರಾ ಇನ್ನು ಮುಂದೆ ‘ಮೊಹಮ್ಮದ್’ ಹೆಸರಿನಲ್ಲಿ ಗುರುತಿಸಿಕೊಳ್ಳಲು ಬಯಸಿದ್ದಾರೆ.

34ರ ಪ್ರಾಯದ ಫರಾ ಲಂಡನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5,000 ಮೀ.ಓಟದಲ್ಲಿ ಭಾಗವಹಿಸುವ ಮೂಲಕ ಟ್ರಾಕ್ ರೇಸಿಂಗ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು. ರವಿವಾರ ರಾತ್ರಿ ನಡೆದ ತನ್ನ ವಿದಾಯದ 5,000 ಮೀ.ಓಟದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು.

ಓಟದಿಂದ ನಿವೃತ್ತಿಯಾಗಿರುವ ಫರಾ ರೋಡ್ ರೇಸಿಂಗ್‌ನಲ್ಲಿ ತನ್ನ ಗಮನವನ್ನು ಹರಿಸಲಿದ್ದಾರೆ. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಫರಾ ತನ್ನ ರೋಡ್ ರೇಸಿಂಗ್‌ನಲ್ಲಿ ‘ಮೊ ಫರಾ’ ಬದಲಿಗೆ ‘ಮೊಹಮ್ಮದ್’ ಹೆಸರಿನಿಂದ ಗುರುತಿಸಿಕೊಳ್ಳಲು ಬಯಸಿದ್ದಾರೆ. ‘‘ರೋಡ್ ರೇಸಿಂಗ್‌ನಲ್ಲಿ ನನ್ನ ಹೆಸರು ‘ಮೊಹಮ್ಮದ್’ ಆಗಿರುತ್ತದೆ. ‘ಮೊ’ ಹೆಸರಿನಲ್ಲಿ ನಾನು ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದೇನೆ. ಈತನಕ ಮಾಡಿರುವ ಸಾಧನೆಯನ್ನು ಮರೆಯಲು ಇಷ್ಟಪಡುತ್ತೇನೆ. ನಾನು ಯೋಚಿಸಿರುವುದನ್ನು ಸಾಧಿಸಿದ್ದೇನೆ’’ ಎಂದು ಮೊಹಮ್ಮದ್ ಹೇಳಿದ್ದಾರೆ.

‘‘ನಾನು ಇಷ್ಟು ವರ್ಷ ಮಾಡಿರುವ ಸಾಧನೆಯಿಂದ ಜನರು ನನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ನಿಮಗೆ ಇಷ್ಟಬಂದಂತೆ ಬರೆಯಿರಿ. ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ನಾನು ಸಾಧನೆ ಮಾಡಿರುವೆ’’ಎಂದು ಕೆಲವು ಮಾಧ್ಯಮಗಳು ತನ್ನ ಹಾಗೂ ಕೋಚ್ ಅಲ್ಬರ್ಟೊ ಸಲಝಾರ್ ಈವರೆಗೆ ಮಾಡಿರುವ ಸಾಧನೆಯನ್ನು ‘ನಾಶಪಡಿಸಲು’ ಯತ್ನಿಸುತ್ತಿರುವುದನ್ನು ಉಲ್ಲೇಖಿಸಿ ಮೊಹಮ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News