ಐದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ವ್ಯವಸ್ಥೆ: ಎಂ.ಬಿ.ಪಾಟೀಲ್

Update: 2017-08-16 14:33 GMT

ವಿಜಯಪುರ, ಆ.16: ಮುಂದಿನ ಎರಡು ವರ್ಷಗೊಳಗಾಗಿ ರಾಜ್ಯದಾದ್ಯಂತ ಐದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪ್ರಕಟಿಸಿದ್ದಾರೆ.

ಬುಧವಾರ ನಗರದ ಬಿಎಲ್‌ಡಿಈ ವಿವಿಯ ಜಲ ಸಾಧನ ವೇದಿಕೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಮತ್ತು ಜಲ ಬಿರಾದಾರಿ ಆಯೋಜಿಸಿದ್ದ ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿಂಗಟಾನೂರು, ಕೊಪ್ಪಳ, ಭದ್ರ ಮೇಲ್ದಂಡೆ, ಕಾವೇರಿ ಕಣಿವೆಯ ಮಳವಳ್ಳಿ ಸೇರಿದಂತೆ ಇತರೆ ಖುಷ್ಕಿ ಭೂ ಪ್ರದೇಶದ 5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಘೋಷಿಸಿದರು.

ಏಷ್ಯಾದ ಅತಿದೊಡ್ಡ ಹನಿ ನೀರಾವರಿ ಯೋಜನೆಯಾದ ರಾಮಥಾಳ ಹನಿ ನೀರಾವರಿ ಯೋಜನೆಯನ್ನು ಮುಂದಿನ ತಿಂಗಳು ಮುಂಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಯಿಂದ 70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

 ರಾಜ್ಯಾದ್ಯಂತ 70 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 25 ಬೃಹತ್ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಕೆರೆ ಕುಂಟೆಗಳ ಪುನಶ್ಚೇತನ, ನಾಲೆಗಳ ಆಧುನೀಕರಣ, ಅಣೆಕಟ್ಟುಗಳ ಆಧುನೀಕರಣ ಯೋಜನೆಗಳು ಒಳಗೊಂಡಿವೆ ಎಂದು ತಿಳಿಸಿದರು.

ವಿಜಯಪುರದ 50ಕ್ಕೂ ಅಧಿಕ ಕುಡಿಯುವ ನೀರಿನ ಬಾವಿಗಳನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 25ಕ್ಕೂ ಹೆಚ್ಚಿನ ಭಾವಿಗಳಲ್ಲಿ ಹೂಳು ಎತ್ತಲಾಗಿದೆ. ಇದರಿಂದ 4 ಲಕ್ಷ ನಾಗರಿಕರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಯೋಜನೆಗಾಗಿ ದಾನಿಗಳಿಂದ 9 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದ ರಾಷ್ಟ್ರೀಯ ಜಲ ಸಮ್ಮೇಳನವನ್ನು ವಿಜಯಪುರದಲ್ಲಿನ ಜಲ ಕ್ರಾಂತಿಯನ್ನು ಮೆಚ್ಚಿ ಜಲ ತಜ್ಞ ರಾಜೇಂದ್ರ ಸಿಂಗ್ ಅವರು ನಗರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಹೇಳಿದರು.

ಜಲ ತಜ್ಞ ರಾಜೇಂದ್ರ ಸಿಂಗ್ ಮಾತನಾಡಿ, ಹಿಂದೆಂದು ಕಾಣದ ನೀರಿನ ತಾತ್ವಾರ ದೇಶಕ್ಕೆ ಎದುರಾಗಿದೆ. ಈ ಗಂಡಾಂತರದಿಂದ ಪಾರಾಗಲು ನದಿಗಳ ಜೋಡಣೆ ಮತ್ತು ಸಣ್ಣ ಕೆರೆಗಳ ರಕ್ಷಣೆ ಮಾಡಬೇಕು ಎಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಅದೃಶ್ಯ ಕಳಸಿದ್ದೇಶ್ವರ ಸ್ವಾಮೀಜಿ, ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್, ಶಾಸಕ ಬಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರದಿಂದ ಅನುದಾನ ಖಡಿತ

ರಾಜ್ಯದ ನೀರಾವರಿ ಯೋಜನೆಗಳಿಗೆ ಬರುತ್ತಿದ್ದ ಶೇ.90ರಷ್ಟು ಅನುದಾನವನ್ನು ಶೇ.25ಕ್ಕೆ ಇಳಿಸಲಾಗಿದೆ. ಇದರಿಂದ ರಾಜ್ಯದ ನೀರಾವರಿ ಯೋಜನೆಗಳಿಗೆ ಹಿನ್ನಡೆಯಾಗಿದೆ.

-ಎಂ.ಬಿ.ಪಾಟೀಲ್, ಜಲ ಸಂಪನ್ಮೂಲ ಸಚಿವ ಮಹಾದಾಯಿ ನೀರು ಹಂಚಿಕೆ ಕುರಿತು ಐದು ವರ್ಷವಾದರೂ ನ್ಯಾಯಾಧಿಕರಣವು ಮಧ್ಯಂತರ ತೀರ್ಪು ನೀಡಿಲ್ಲ. ಆದ್ದರಿಂದ ಈ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಬೇಕು. ನಾಗರಿಕರು ಒತ್ತಾಯಿಸಿದರೆ ಆದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

-ಎಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News