×
Ad

ಶರತ್ ಮೃತದೇಹದ ಮೆರವಣಿಗೆ ವೇಳೆ ನಿಷೇಧಾಜ್ಞೆ ಉಲ್ಲಂಘನೆ : ಹೈಕೋರ್ಟ್‌ಗೆ ವಿಸಿಡಿ ಸಲ್ಲಿಕೆ

Update: 2017-08-16 23:18 IST

ಬೆಂಗಳೂರು, ಆ.16: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಕೋಮುಗಲಭೆಯಲ್ಲಿ ಕೊಲೆಯಾದ ಶರತ್ ಮಡಿವಾಳ ಅವರ ಮೃತದೇಹದ ಮೆರವಣಿಗೆ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿ ಸಾವಿರಾರು ಜನರನ್ನು ಸೇರಿಸಿ ಗಲಾಟೆ ಎಬ್ಬಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟು ಮಾಡಿದ ಆರೋಪ ಪ್ರಕರಣದ ವಿಸಿಡಿಯನ್ನು ಸರಕಾರಿ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

ಈ ಸಂಬಂಧ ತಮ್ಮ ವಿರುದ್ಧ ಬಂಟ್ವಾಳ ಪೊಲೀಸರು ದಾಖಲಿಸಿದ ಎಫ್‌ಐಆರ್ ರದ್ದು ಕೋರಿ ಸತ್ಯಜಿತ್ ಸುರತ್ಕಲ್, ಹಿಂದೂ ಜಾಗರಣಾ ವೇದಿಕೆಯ ಹರೀಶ್ ಪೂಂಜಾ, ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮುರಳಿ ಕೃಷ್ಣ ಹಸಂತಡ್ಕ, ದಕ್ಷಿಣ ಕನ್ನಡ ಜಿಲ್ಲಾ ಬಜರಂಗ ದಳದ ಅಧ್ಯಕ್ಷ ಶರಣ್ ಪಂಪ್‌ವೆಲ್, ಗೋರಕ್ಷಕ ಪ್ರಮುಖ ಸಂಘದ ಪ್ರದೀಪ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ ಗಲಾಟೆ ಪ್ರಕರಣದ ವಿಸಿಡಿಯನ್ನು ನ್ಯಾಯಪೀಠಕ್ಕೆ ಹಾಜರುಪಡಿಸಬೇಕು ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸರಕಾರಿ ಪರ ವಕೀಲರು ಬುಧವಾರ ನ್ಯಾಯಪೀಠಕ್ಕೆ ವಿಸಿಡಿಯನ್ನು ಸಲ್ಲಿಸಿದರು. ಈ ವಿಸಿಡಿಯನ್ನು  ನ್ಯಾಯಮೂರ್ತಿಗಳು ಸ್ವೀಕರಿಸಿದರು.

ಬಳಿಕ ತಮ್ಮ ಕಚೇರಿಯಲ್ಲಿ ವೀಕ್ಷಿಸಲಾಗುವುದು. ತದನಂತರ ಅರ್ಜಿ ವಿಚಾರಣೆ ಮುಂದುವರಿಸಲಾಗುವುದು ಎಂದು ತಿಳಿಸಿ ಗುರುವಾರಕ್ಕೆ ವಿಚಾರಣೆ ಮುಂದೂಡಿದರು.

ಅರ್ಜಿಯ ಹಿಂದಿನ ವಿಚಾರಣೆ ವೇಳೆ ಶರತ್ ಮೃತದೇಹದ ಮೆರವಣಿಗೆ ವೇಳೆ ಅರ್ಜಿದಾರರು ಅನ್ಯ ಕೋಮಿನವರ ವಿರುದ್ಧ ಪ್ರಚೋದನಕಾರಿ ಮಾತು ಆಡಿದರು. ಇದರಿಂದ ಗಲಭೆ ಉಂಟಾಗಿಯಿತು. ಆ ವೇಳೆ ಕಲ್ಲುತೂರಾಟ ನಡೆಸಲಾಯಿತು. ಸ್ಥಳದಲ್ಲಿ ಅರ್ಜಿದಾರರು ಹಾಜರಿದ್ದರು. ಬಂಟ್ವಾಳ ಠಾಣಾ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಗಲಭೆಯ ದೃಶ್ಯಗಳನ್ನು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಬಲವಾಗಿ ವಾದ ಮಾಡಿದ್ದರು.

ಇದರಿಂದ ಗಲಭೆಯ ದೃಶ್ಯಗಳನ್ನು ಒಳಗೊಂಡ ವಿಸಿಡಿಯನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಸರಕಾರಿ ಅಭಿಯೋಜಕರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ಅದರಂತೆ ಬುಧವಾರ ವಿಸಿಡಿಯನ್ನು ಕೋರ್ಟ್‌ಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News