ಸಿದ್ದರಾಮಯ್ಯರ ಇಂದಿರಾ ಕ್ಯಾಂಟೀನ್ ಬೆಂಗಳೂರಿಗೆ ಸೀಮಿತವಾಗದಿರಲಿ

Update: 2017-08-16 18:40 GMT

‘ನಗರದಲ್ಲಿ ಚಳಿಗೆ ಎರಡು ಬಲಿ’ ಎನ್ನುವಂತಹ ಸುದ್ದಿಗಳನ್ನು ಆಗಾಗ ನಾವು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇಂತಹ ಸಾವುಗಳು ನಡೆಯುವುದು ನಗರಗಳಲ್ಲೇ ಅಧಿಕ. ಅದರಲ್ಲೂ ಮುಖ್ಯವಾಗಿ ನಗರಗಳ ಬೀದಿಗಳಲ್ಲಿ. ಚಳಿಗೆ ಒಬ್ಬನನ್ನು ಸಾಯಿಸುವ ಶಕ್ತಿಯಿದೆಯೇ? ಎನ್ನುವ ಪ್ರಶ್ನೆಯನ್ನು ಹಾಕಿದರೆ, ಈ ವರದಿಯ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಸಾವುಗಳಲ್ಲಿ ಬಹುತೇಕ ಸಂಭವಿಸುವುದು ಹಸಿವಿನಿಂದ.

ನಗರಗಳ ಬೀದಿ ಬದಿಯಲ್ಲಿ ವಾಸಿಸುವರಲ್ಲಿ ವೃದ್ಧರ ಸಂಖ್ಯೆ ಬಹುದೊಡ್ಡದು. ಈ ವೃದ್ಧರಾದರೂ ಎಲ್ಲಿಂದ ಬಂದವರು? ಅವರೇನೂ ಪಾಕಿಸ್ತಾನ, ಬಾಂಗ್ಲಾದ ವಲಸಿಗರಲ್ಲ. ಅಥವಾ ಅನ್ಯಗ್ರಹಗಳಿಂದ ಉದುರಿ ಬಿದ್ದವರೂ ಅಲ್ಲ. ಹೆಚ್ಚಿನವರು, ನಗರಗಳಲ್ಲಿ ಕೃಷಿ ಕ್ಷೇತ್ರ ನೆಲಕಚ್ಚಿ, ಕೂಲಿ ಕೆಲಸ ಹುಡುಕುತ್ತಾ ನಗರಕ್ಕೆ ವಲಸೆ ಬಂದವರು. ನಗರಗಳಿಗೆ ಒತ್ತಿಕೊಂಡಿರುವ ಕೊಳಚೆಗೇರಿಗಳಲ್ಲಿ ಬದುಕುತ್ತಿರುವವರು, ಕೆಲಸ ಹುಡುಕುತ್ತಾ ನಗರಕ್ಕೆ ಆಗಮಿಸುವವರು ಇವರೆಲ್ಲರ ಬಹುದೊಡ್ಡ ಸಮಸ್ಯೆಯೇ ಅಪೌಷ್ಟಿಕತೆ. ಈ ಅಸಂಘಟಿತ ಕಾರ್ಮಿಕರು ಕೆಲಸ ಸಿಗದೇ ಇರುವ ದಿನ ಅರೆಹೊಟ್ಟೆಯಲ್ಲೇ ಮಲಗಬೇಕು. ಇದು ಕೇವಲ ಬೆಂಗಳೂರಿನಂತಹ ನಗರಗಳಿಗಷ್ಟೇ ಸೀಮಿತವಲ್ಲ, ಇಡೀ ದೇಶದ ನಗರಗಳ ಅಸಂಘಟಿತ ಕೂಲಿ ಕಾರ್ಮಿಕರೆಲ್ಲರ ಸ್ಥಿತಿ. ಆಗಾಗ ನಗರಗಳಲ್ಲಿ ಚಳಿ ಜಾಸ್ತಿಯಾಗಿ ಸಾಯುವವರೂ ಈ ವರ್ಗಕ್ಕೆ ಸೇರಿದವರೇ ಆಗಿದ್ದಾರೆ.

ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಸರಕಾರ ಬೆಂಗಳೂರಿನಂತಹ ನಗರದಲ್ಲಿ ‘ಇಂದಿರಾ ಕ್ಯಾಂಟೀನ್’ ತೆರೆದಿರುವುದು ಈ ಶ್ರಮಜೀವಿಗಳ ಪಾಲಿಗೆ ದೇವಸ್ಥಾನವೇ ತೆರೆದಂತಾಗಿದೆ. ನಗರಗಳ ಹೊಟೇಲುಗಳಲ್ಲಿ ದರಗಳು ಎಟುಕದೆ ಅರೆಹೊಟ್ಟೆಯಲ್ಲಿ ಬದುಕು ಕಳೆಯುವ ನೂರಾರು ಜನರಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳೂ ಸೇರುತ್ತಾರೆ ಎನ್ನುವುದು ಆತಂಕದ ಸಂಗತಿ. ಹಿಂದೆ, ಬ್ರಾಹ್ಮಣರಲ್ಲಿ ವಿದ್ಯೆ ಕಲಿಯುವವರಿಗೆ ‘ವಾರಾನ್ನ’ದ ವ್ಯವಸ್ಥೆಯಿತ್ತು. ದಿನಕ್ಕೆ ಒಂದೊಂದು ಮನೆಯಲ್ಲಿ ಊಟ ಮಾಡಿ ಅವರು ವಾರಗಳನ್ನು ಕಳೆಯುತ್ತಿದ್ದರು.ಇಂತಹ ವಾರಾನ್ನದ ಊಟ ಮಾಡಿ, ಅತ್ಯುನ್ನತ ಸ್ಥಾನ ಪಡೆದ ಬಹಳಷ್ಟು ಜನರಿದ್ದಾರೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಕೂಡ. ಆದರೆ ಇಂತಹ ವಾರನ್ನ ಸೇವಿಸುವ ಸಂದರ್ಭದಲ್ಲಿ ಅವರು ಸಾಕಷ್ಟು ಮುಜುಗರವನ್ನು, ಕೀಳರಿಮೆಯನ್ನು ಅನುಭವಿಸಬೇಕಾಗಿತ್ತು. ಆದರೆ ಸರಕಾರವೇ ನಡೆಸುವ ಇಂದಿರಾಕ್ಯಾಂಟೀನ್‌ನಲ್ಲಿ ಯಾರೂ ಇನ್ನೊಬ್ಬರ ಮುಂದೆ ತಲೆತಗ್ಗಿಸಬೇಕಾಗಿಲ್ಲ.

ಒಂದು ಹೊತ್ತಿನ ಊಟಕ್ಕೆ ಬೆಂಗಳೂರಿನಂತಹ ನಗರಗಳಲ್ಲಿ ಕಡಿಮೆಯೆಂದರೂ 50 ರೂಪಾಯಿ ಇದೆ. ಇಂದಿರಾಕ್ಯಾಂಟೀನ್ ಮೂಲಕ ಕನಿಷ್ಠ ಐದು ದಿನ ಆ ಹಣದಲ್ಲಿ ಊಟ ಮಾಡಬಹುದಾಗಿದೆ. ತಮಿಳುನಾಡು ಸರಕಾರದ ಯೋಜನೆ ಸಿದ್ದರಾಮಯ್ಯ ಅವರಿಗೆ ಸ್ಫೂರ್ತಿಯಾಗಿದೆ. ಈ ಯೋಜನೆಯಿಂದ ಜಯಲಲಿತಾ ಅವರು ತಮಿಳುನಾಡಿನ ಮನೆಮನೆಯಲ್ಲಿ ಮಾತಾಗಿದ್ದರು. ಒಂದು ರೂಪಾಯಿಯಲ್ಲಿ ಅಕ್ಕಿಯನ್ನು ನೀಡಿದ ಸಿದ್ದರಾಮಯ್ಯ ಅವರಿಗೆ, ಈ ಯೋಜನೆ ಆಕರ್ಷಕವಾಗಿ ಕಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ವಿಪರ್ಯಾಸವೆಂದರೆ, ಒಂದು ರೂಪಾಯಿಗೆ ಅಕ್ಕಿಕೊಟ್ಟಾಗ ಅದಕ್ಕೆ ತಕರಾರು ತೆಗೆದ ಜನರು, ಇದೀಗ ಈ ಇಂದಿರಾಕ್ಯಾಂಟೀನ್ ಕುರಿತಂತೆಯೂ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ನೋಟು ನಿಷೇಧಗಳಿಂದ ಜನರ ಬದುಕು ದುರ್ಬರವಾದಾಗ ವೌನವಾಗಿದ್ದ, ಜಿಎಸ್‌ಟಿ ತೆರಿಗೆಯಿಂದ ದೈನಂದಿನ ಬದುಕು ಅಸ್ತವ್ಯಸ್ತವಾದಾಗ, ಸಿಲಿಂಡರ್‌ಗಳಿಗೆ ಸಬ್ಸಿಡಿಯನ್ನು ಹಂತಹಂತವಾಗಿ ಕಿತ್ತು ಹಾಕಲು ಸರಕಾರ ನಿರ್ಧಾರ ಮಾಡಿದಾಗ ವೌನವಾಗಿದ್ದ ಈ ಜನರು, ಬಡವರಿಗೆ ಅಗ್ಗದ ದರದಲ್ಲಿ ಊಟ ಕೊಡುವಾಗ ಅದನ್ನು ಟೀಕಿಸುತ್ತಿರುವುದೇ ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಒಂದು ರೂಪಾಯಿಯಲ್ಲಿ ಅಕ್ಕಿ ಕೊಟ್ಟಾಗ, ‘ಇದರಿಂದ ತೋಟಕ್ಕೆ ಕೆಲಸ ಮಾಡಲು ಜನರು ಸಿಗುವುದಿಲ್ಲ’ ‘ಜನರು ಸೋಮಾರಿಗಳಾಗುತ್ತಾರೆ’ ‘ಜನರು ಕುಡಿತಕ್ಕೆ ಅದನ್ನು ಬಳಸುತ್ತಾರೆ’ ಎಂದು ಒಂದು ವರ್ಗ ಹಲುಬತೊಡಗಿತು.

ಒಂದು ರೂಪಾಯಿಗೆ ಅಕ್ಕಿ ಕೊಟ್ಟರೆ, ಉಳಿತಾಯವಾದ ಹಣದಿಂದ ಅವರು ತಮ್ಮ ಮಕ್ಕಳಿಗೆ ಓದಲು ಪುಸ್ತಕ ಕೊಂಡುಕೊಳ್ಳಬಹುದು, ಒಳ್ಳೆಯ ಧಿರಿಸುಗಳನ್ನು ಕೊಳ್ಳಬಹುದು ಅಥವಾ ಮನೆಗೆ ಹೆಚ್ಚುವರಿ ದಿನಸಿಗಳನ್ನು ತರಬಹುದು ಎಂದು ಈ ವರ್ಗಕ್ಕೆ ಹೊಳೆಯಲಿಲ್ಲ. ‘ತಮ್ಮ ತೋಟಕ್ಕೆ ದುಡಿಯಲು ಬರುವುದು ಈ ಬಡಜನರ ಕರ್ತವ್ಯ’ ಎಂಬಂತೆ ಅಮಾನವೀಯ ಹೇಳಿಕೆಗಳನ್ನು ನೀಡಿದ್ದರು. ಅದೇ ವರ್ಗ ಇದೀಗ ಇಂದಿರಾ ಕ್ಯಾಂಟೀನ್‌ನ್ನು ಚುನಾವಣಾ ರಾಜಕೀಯ ಎಂದು ಹೇಳಿ ವ್ಯಂಗ್ಯ ಮಾಡಲು ಹವಣಿಸುತ್ತಿದೆ. ಚುನಾವಣೆಗಳಿಗಾಗಿ ಜನರ ನಡುವೆ ವಿಷ ಬೀಜ ಬಿತ್ತಿ, ಕೋಮುಗಲಭೆ ನಡೆಸುವ ನಾಯಕರಿಗೆ ಹೋಲಿಸಿದರೆ, ಅಗ್ಗದ ಬೆಲೆಗೆ ಜನರಿಗೆ ಊಟ ಕೊಟ್ಟು ನಡೆಸುವ ರಾಜಕಾರಣವೇ ಶ್ರೇಷ್ಠವಾದುದು.

ಜನಸಾಮಾನ್ಯರ ಒಂದೊಂದೇ ಸವಲತ್ತುಗಳನ್ನು ಕಿತ್ತು ಅದನ್ನು ಅದಾನಿ, ಅಂಬಾನಿಗಳಂತಹ ಕಾರ್ಪೊರೇಟ್ ವರ್ಗಗಳಿಗೆ ನೀಡುವ ನರೇಂದ್ರ ಮೋದಿಯವರ ರಾಜಕಾರಣಕ್ಕಿಂತ, ಬಡವರಿಗೆ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ, ಅಗ್ಗದಲ್ಲಿ ಊಟ ಕೊಡುವ ಸಿದ್ದರಾಮಯ್ಯ ಅವರ ರಾಜಕೀಯ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಕೇಂದ್ರದಲ್ಲಿ ಶ್ರೀಮಂತರನ್ನು ಓಲೈಸಿ ರಾಜಕಾರಣ ನಡೆಯುತ್ತಿದ್ದರೆ, ರಾಜ್ಯದಲ್ಲಿ ಬಡವರನ್ನು ಓಲೈಸಿ ರಾಜಕಾರಣ ನಡೆಯುತ್ತಿದೆ. ಇಂದು ದೇಶಕ್ಕೆ ಬೇಕಾಗಿರುವುದು ಬಡವರ ಓಲೈಕೆಯ ರಾಜಕಾರಣವಾಗಿದೆ. ಕ್ಯಾಂಟಿನ್‌ಗೆ ಇಂದಿರಾಗಾಂಧಿಯ ಹೆಸರಿಟ್ಟಿರುವ ಕುರಿತಂತೆ ಕೆಲವರಿಗೆ ಆಕ್ಷೇಪಗಳಿವೆ. ಆದರೆ ಇಂದಿರಾಗಾಂಧಿಯನ್ನು ದೇಶದ ಜನರು ಇದೀಗ ನೆನಪಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಇಂದಿರಾ ಅವರು ‘ಬಡವರು ಮತ್ತು ಅಭಿವೃದ್ಧಿ’ಯನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡಿದವರು.

‘ಗರೀಬಿ ಹಠಾವೋ’ ಘೋಷಣೆಯ ಮೂಲಕ ರಾಜಕೀಯ ನಡೆಸಿದವರು. ಭೂಸುಧಾರಣೆ ಕಾಯ್ದೆಯ ಮೂಲಕ ಜಮೀನ್ದಾರರ ಭೂಮಿಯನ್ನು ಕಿತ್ತು ಬಡವರಿಗೆ ಕೊಟ್ಟ ಹೆಗ್ಗಳಿಕೆಯೂ ಇಂದಿರಾಗಾಂಧಿಯದ್ದೇ ಆಗಿದೆ. ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಸಾಮಾನ್ಯ ಜನರು ಬ್ಯಾಂಕ್ ಮೆಟ್ಟಿಲು ತುಳಿಯುವುದಕ್ಕೆ ಅವಕಾಶ ಮಾಡಿಕೊಟ್ಟರು. ‘ಸಾಲಮೇಳ’ದ ಮೂಲಕ ಜನರನ್ನು ಸ್ವಾವಲಂಬಿಯಾಗಿಸಲು ಪ್ರಯತ್ನಿಸಿದರು. ಅವರ ಹಲವು ಯೋಜನೆಗಳು ಜನರನ್ನು ತಲುಪಲು ವಿಫಲವಾಗಿರಬಹುದು. ಕೆಲವು ಗುರಿ ಮುಟ್ಟದೇ ಇರಬಹುದು. ಆದರೆ ಅವರು ಜನಸಾಮಾನ್ಯರ ನಡುವೆಯೇ ಓಡಾಡುತ್ತಾ ತಮ್ಮ ರಾಜಕಾರಣ ನಡೆಸಿದರು ಎನ್ನುವುದನ್ನು ಮರೆಯಲಾಗುವುದಿಲ್ಲ.

ಬ್ಯಾಂಕ್‌ಗಳು ಮತ್ತೆ ಶ್ರೀಮಂತರ ಹಿಡಿತಕ್ಕೆ ಸಿಲುಕಿಕೊಂಡಿದೆ. ಬಡವರ ಭೂಮಿಯನ್ನು ಕಿತ್ತು ಕಾರ್ಪೊರೇಟ್ ಶಕ್ತಿಗಳಿಗೆ ನೀಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ‘ಬಡವರಿಗೆ ಕಡಿಮೆ ದರದಲ್ಲಿ ಊಟ ಹಾಕುವ ಕ್ಯಾಂಟೀನ್’ ತೆರೆದಿರುವುದು ಕೆಲವರಿಗೆ ವಿಚಿತ್ರವೆನಿಸುವುದು ಸಹಜವೇ ಆಗಿದೆ. ಇಂತಹ ಮನಸ್ಥಿತಿಗಳಿಗೆ ಇಂದಿರಾಗಾಂಧಿಯ ಹೆಸರು ಅಪಥ್ಯವಾದುದರಲ್ಲಿಯೂ ಅಚ್ಚರಿಯಿಲ್ಲ. ಅದೇನೇ ಇರಲಿ, ಇಂದಿರಾ ಕ್ಯಾಂಟೀನ್ ಬರೇ ಬೆಂಗಳೂರಿಗೆ ಸೀಮಿತವಾಗದೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ತೆರೆಯುವಂತಾಗಲಿ. ನಗರದ ಬೀದಿಯಲ್ಲಿ ಯಾವನೂ ಹಸಿವಿನಿಂದ ಸಾಯುವ ಪ್ರಸಂಗ ಬಾರದೇ ಇರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News