ಮುಸ್ಲಿಂ ಪ್ರಾಂಶುಪಾಲನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ್ ಹೇಳಿಸಿದ ಗುಂಪು

Update: 2017-08-17 06:39 GMT

ತೆಲಂಗಾಣ, ಆ.17: ಮಂಗಳವಾರ ಸ್ವಾತಂತ್ರ್ಯ ದಿನದಂದು ತೆಲಂಗಾಣದ ಜೂನಿಯರ್ ಸರಕಾರಿ ಕಾಲೇಜೊಂದರ ಪ್ರಾಂಶುಪಾಲರಾಗಿರುವ ಮುಹಮ್ಮದ್ ಯಾಖೀನ್ ಧ್ವಜಾರೋಹಣ ಮಾಡುತ್ತಿದ್ದಾಗ ಸಭಿಕರಲ್ಲಿ ಯಾರೋ ‘‘ಶೂ ತೆಗೆಯಿರಿ’’ ಎಂದಾಗ ಇನ್ನಷ್ಟು ದನಿಗಳು ಸೇರಿಕೊಂಡಿದ್ದವು. ಇವುಗಳ ನಡುವೆಯೇ ಯಾಖೀನ್ ಅವರು ಧ್ವಜಾರೋಹಣ ನೆರವೇರಿಸಿದ್ದರಲ್ಲದೆ ರಾಷ್ಟ್ರಗೀತೆಯನ್ನೂ ನುಡಿಸಲಾಗಿತ್ತು.  ಪ್ರಾಂಶುಪಾಲರು ಶೂ ತೆಗೆಯಲಿಲ್ಲ ಎಂಬ ಕಾರಣವೊಡ್ಡಿ ತಂಡವೊಂದು ಆಗ ಅವರ ಮೇಲೆ ಹಲ್ಲೆಗೈದಿದೆ.

ಸುಮಾರು ಒಂದು ಡಜನಿಗೂ ಅಧಿಕ ಗ್ರಾಮಸ್ಥರು ಮತ್ತು ಕೆಲ ವಿದ್ಯಾರ್ಥಿಗಳು ಸೇರಿ  ಪ್ರಾಂಶುಪಾಲರಿಂದ ಬಲವಂತವಾಗಿ 'ಜೈ ಶ್ರೀ ರಾಮ್' ಹಾಗೂ 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆ ಕೂಗಿಸಿದರು. ಧ್ವಜಾರೋಹಣ ಮಾಡುವಾಗ ಶೂ ತೆಗೆಯಬೇಕೆಂಬ ನಿಯಮವೇನೂ ಇಲ್ಲವೆಂದು ಯಾಖೀನ್ ತಮ್ಮ ಹಲ್ಲೆಕೋರರಿಗೆ ತಿಳಿಸಿದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಈ ಘಟನೆಯ ವೀಡಿಯೋವನ್ನು ಯಾರೋ ಚಿತ್ರೀಕರಿಸಿದ್ದು, ಅದರಲ್ಲಿ ಗುಂಪೊಂದು ಬೊಬ್ಬೆ ಹೊಡೆಯುತ್ತಾ  ಪ್ರಾಂಶುಪಾಲರನ್ನು ಹಿಡಿದೆಳೆದಿರುವುದು ಕಾಣಿಸುತ್ತದೆ. ‘‘ಪಾಕಿಸ್ತಾನಕ್ಕೆ ಹೋಗಿ’’ ಎಂದು ಕೆಲವರು  ಪ್ರಾಂಶುಪಾಲರಿಗೆ ಹೇಳಿದ್ದರೆಂದೂ ಕೆಲ ವರದಿಗಳು ತಿಳಿಸುತ್ತವೆ.
 ಪ್ರಾಂಶುಪಾಲರು ನೀಡಿದ ದೂರಿನ ಆಧಾರದಲ್ಲಿ 15 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಹಲ್ಲೆಕೋರರು ಎಬಿವಿಪಿಗೆ ಸೇರಿದವರೆಂದು ಆರೋಪಿಸಿದ್ದಾರೆ. ‘‘ಬಿಜೆಪಿಯ ಮುಖ್ಯಮಂತ್ರಿಯೊಬ್ಬರೂ ಶೂ ಧರಿಸಿದ್ದರು. ಅವರ ವಿರುದ್ಧ ಕೂಡ ಪ್ರತಿಭಟಿಸುತ್ತಾರೇನು?’’ ಎಂದು ಅವರು ಪ್ರಶ್ನಿಸಿದ್ದಾರೆ.  ಪ್ರಾಂಶುಪಾಲರು ಮುಸ್ಲಿಮರಾಗಿರುವುದೇ ಅವರ ಮೇಲಿನ ದಾಳಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News