ಬಿಹಾರ ಮುಖ್ಯಮಂತ್ರಿ ನಿವಾಸದ ಹೊರಗೆ ನಿತೀಶ್,ಶರದ್ ಬೆಂಬಲಿಗರ ನಡುವೆ ಘರ್ಷಣೆ

Update: 2017-08-19 12:52 GMT

ಪಾಟ್ನಾ,ಆ.19: ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ಅವರ ನೇತೃತ್ವದ ವಿರೋಧಿ ಜೆಡಿಯು ಬಣಗಳ ಬೆಂಬಲಿಗರು ಶನಿವಾರ ಇಲ್ಲಿಯ ಮುಖ್ಯಮಂತ್ರಿಗಳ ನಿವಾಸದೆದುರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಯಾದವ್ ಬಣವು ಇಂದು ಇಲ್ಲಿಯ ಎಸ್.ಕೆ.ಮೆಮೋರಿಯಲ್ ಹಾಲ್‌ನಲ್ಲಿ ಜನ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ಸ್ಥಳಕ್ಕೆ ತೆರಳುತ್ತಿದ್ದ ಯಾದವ್ ಅವರಿದ್ದ ಕಾರಿಗೆ ಬೈಕ್‌ಗಳಲ್ಲಿ ಬೆಂಗಾವಲಾಗಿ ಸಾಗುತ್ತಿದ್ದ ಅವರ ಬೆಂಬಲಿಗರು ಮಾರ್ಗಮಧ್ಯೆ ಮುಖ್ಯಮಂತ್ರಿ ನಿತೀಶ ಕುಮಾರ್ ಅವರ ನಿವಾಸದ ಹೊರಗೆ ವಾಹನಗಳನ್ನು ನಿಲ್ಲಿಸಿ ಘೋಷಣೆಗಳನ್ನು ಕೂಗತೊಡಗಿದ್ದರು. ಅವರ ಪೈಕಿ ದೊಣ್ಣೆಗಳು ಮತ್ತು ಬೆಲ್ಟ್‌ಗಳನ್ನು ಹಿಡಿದಿದ್ದ ಕೆಲವರು ನಿವಾಸದೊಳಕ್ಕೆ ನುಗ್ಗಲು ಯತ್ನಿಸಿದ್ದರು. ಈ ವೇಳೆ ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಗಾಗಿ ಅಲ್ಲಿ ಸೇರಿದ್ದ ಕುಮಾರ್ ಬೆಂಬಲಿಗರು ಹೊರಬಂದಿದ್ದು, ಉಭಯ ಗುಂಪುಗಳ ನಡುವೆ ಹೊಯ್‌ಕೈ ಸಂಭವಿಸಿತ್ತು.

ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಎಸ್‌ಎಸ್‌ಪಿ ಮನು ಮಹಾರಾಜ್ ಅವರು,ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ತಿಳಿಸಿದರು.

ಜೆಡಿಯುದ ಉಭಯ ಬಣಗಳು ಇಂದು ಸಮಾನಾಂತರ ಸಭೆಗಳನ್ನು ನಡೆಸಿದ್ದವು.

ಯಾದವ, ಅಮಾನತುಗೊಂಡಿರುವ ಜೆಡಿಯು ಸಂಸದ ಅಲಿ ಅನ್ವರ್ ಮತ್ತು ಮಾಜಿ ಬಿಹಾರ ಸಚಿವ ರಮಾಯಿ ರಾಮ್ ಅವರು ಜನ್ ಅದಾಲತ್‌ನಲ್ಲಿ ಪಾಲ್ಗೊಂಡವರಲ್ಲಿ ಪ್ರಮುಖರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News