ವಿಶ್ವಕಪ್ ತಂಡ ಕಟ್ಟಲು ಭಾರತ ತಯಾರಿ

Update: 2017-08-19 18:31 GMT

ಡಂಬುಲಾ, ಆ.19: ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇಪ್ಪತ್ತೊಂದು ತಿಂಗಳು ಬಾಕಿ ಇದೆ. ಲಂಕಾ ವಿರುದ್ಧದ ಸರಣಿಯೊಂದಿಗೆ ಭಾರತ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಲು ತಯಾರಿ ಆರಂಭಿಸಲಿದೆ. ಶ್ರೀಲಂಕಾ ವಿರುದ್ಧ ಐದು ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಮೊದಲ ಪಂದ್ಯ ರವಿವಾರ ರಂಗಿರಿಯ ಡಂಬುಲಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಈಗಾಗಲೇ ಮೂರು ಟೆಸ್ಟ್‌ಗಳ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿರುವ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಅದೇ ಪ್ರದರ್ಶನ ಮುಂದುವರಿಸುವ ಯೋಜನೆಯಲ್ಲಿದೆ.

‘‘ಭಾರತ ಈ ಸರಣಿಯನ್ನು ಇನ್ನೊಂದು ದ್ವಿಪಕ್ಷೀಯ ಸರಣಿಯಾಗಿ ಪರಿಗಣಿಸದೆ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲಿರುವ ಆಟಗಾರರ ಫಿಟ್‌ನೆಸ್ ಕಾಯ್ದುಕೊಳ್ಳುವ ಕಡೆಗೆ ಹೆಚ್ಚಿನ ಗಮನ ಹರಿಸಲಾಗುವುದು’’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ.ಪ್ರಸಾದ್ ಹೇಳಿದ್ದಾರೆ.

►ರಾಹುಲ್ ನಂ.4

ಟೆಸ್ಟ್ ತಂಡದ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಏಕದಿನ ಸರಣಿಯಲ್ಲಿ ನಂ.4 ಸರದಿಯಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆಂದು ಪ್ರಸಾದ್ ಮಾಹಿತಿ ನೀಡಿದ್ದಾರೆ. ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಗಾಯದ ಕಾರಣದಿಂದಾಗಿ ಅವರಿಗೆ ಕೇವಲ 6 ಪಂದ್ಯಗಳಲ್ಲಿ ಆಡಲು ಸಾಧ್ಯವಾಗಿದೆ. ಈ ಎಲ್ಲ ಪಂದ್ಯಗಳಲ್ಲಿ ಅವರು ಆರಂಭಿಕ ದಾಂಡಿಗನಾಗಿ ಕಣಕ್ಕಿಳಿದಿದ್ದರು. 2016, ಜೂನ್ 11ರಂದು ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ (ಔಟಾಗದೆ 100) ದಾಖಲಿಸಿದ್ದರು. ಜೂನ್ 13ರಂದು ಎರಡನೆ ಪಂದ್ಯದಲ್ಲಿ 33 ರನ್ , ಜೂನ್ 15ರಂದು ಮೂರನೆ ಪಂದ್ಯದಲ್ಲಿ ಅರ್ಧಶತಕ(63) ದಾಖಲಿಸಿದ್ದರು.

 ಬಳಿಕ 2017ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಅವರು ಕಳಪೆ ಪ್ರದರ್ಶನ ನೀಡಿದ್ದರು. ಒಟ್ಟು 24 ರನ್ ಕಲೆ ಹಾಕಿದ್ದರು. ಪುಣೆಯಲ್ಲಿ ಜ.15ರಂದು ನಡೆದ ಪಂದ್ಯದಲ್ಲಿ 8ರನ್, ಜ.19 ಕಟಕ್‌ನಲ್ಲಿ 5 ರನ್ ಮತ್ತು ಕೋಲ್ಕತಾದಲ್ಲಿ ಜ.22ರಂದು ನಡೆದ ಪಂದ್ಯದಲ್ಲಿ 11 ರನ್ ಗಳಿಸಿದ್ದರು. ಬಳಿಕ ಅವರಿಗೆ ಆಡಲು ಸಾಧ್ಯವಾಗಲಿಲ್ಲ. ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿಯಬೇಕಾಯಿತು. ಅವರು ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದಿದ್ದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅವರಿಗೆ ಆಡಲು ಅವಕಾಶ ಇತ್ತು. ಆದರೆ ಅವರ ಬದಲಿಗೆ ಯುವರಾಜ್ ಸಿಂಗ್ ಅವಕಾಶ ಗಿಟ್ಟಿಸಿಕೊಂಡರು. ಯುವಿ ಅವಕಾಶದ ಸದುಪಯೋಗ ಪಡೆಯಲಿಲ್ಲ.

ರಾಹುಲ್ ಸೀಮೀತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ 2016ರ ಸರಣಿಯಲ್ಲಿ 12 ಇನಿಂಗ್ಸ್‌ಗಳಲ್ಲಿ 44.11 ಸರಾಸರಿಯಂತೆ 397 ರನ್ ದಾಖಲಿಸಿದ್ದರು.

 ಅಂತಾರಾಷ್ಟ್ರೀಯ ಕ್ರಿಕೆಟ್ ದೇಶೀಯ ಟ್ವೆಂಟಿ-20 ಕ್ರಿಕೆಟ್‌ಗಿಂತ ಭಿನ್ನವಾಗಿದೆ. ಟೀಮ್ ಮ್ಯಾನೇಜ್‌ಮೆಂಟ್ ರಾಹುಲ್ ಅವರಿಗೆ ಅನುಕೂಲವಾದ ಸರದಿಯಲ್ಲಿ ಆಡಲು ಅವಕಾಶ ಕಲ್ಪಿಸಿದೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸಲಿದ್ದಾರೆ. ಅಜಿಂಕ್ಯ ರಹಾನೆ ಆರಂಭಿಕ ದಾಂಡಿಗನಾಗಿ ಮೂರನೆ ಆಯ್ಕೆಯಾಗಿ ತಂಡದಲ್ಲಿದ್ದಾರೆ. ಕೊಹ್ಲಿ ಮೂರನೆ ಕ್ರಮಾಂಕದಲ್ಲಿ ಆಡಲಿದ್ದಾರೆ.

 ಮನೀಷ್ ಪಾಂಡೆ ಮತ್ತು ಕೇದಾರ್ ಜಾಧವ್ ತಂಡದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ನಂ.5 ಸರದಿಯಲ್ಲಿ ಆಡಲಿದ್ದಾರೆ.ಹಾರ್ದಿಕ್ ಪಾಂಡ್ಯ ನಂ.7ರಲ್ಲಿ ಆಲ್‌ರೌಂಡರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕೇದಾರ್ ಜಾಧವ್ ಅವರು ನಂ.6 ಸರದಿಯ ಮೇಲೆ ಕಣ್ಣಿಟ್ಟಿದ್ದಾರೆ.ಆದರೆ ಜಾಧವ್ ಕಳೆದ ಎರಡು ಸರಣಿಗಳಲ್ಲಿ ಫೀಲ್ಡಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಕಾರಣದಿಂದಾಗಿ ಅವರು ಅವಕಾಶಕ್ಕಾಗಿ ಎದುರು ನೋಡುವಂತಾಗಿದೆ.

►ಭಾರತಕ್ಕೆ 9 ಪಂದ್ಯಗಳಲ್ಲಿ ಜಯ

ರಂಗಿರಿಯ ಡಂಬುಲಾ ಇಂಟರ್‌ನ್ಯಾಶನಲ್ ಕ್ರೀಡಾಂಗಣ ಭಾರತದ ಪಾಲಿಗೆ ಅದೃಷ್ಟದ ತಾಣವಲ್ಲ. ಭಾರತ ವಿವಿಧ ತಂಡಗಳೊಂದಿಗೆ ಆಡಿದ 17 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಜಯ ಗಳಿಸಿದೆ. ಶ್ರೀಲಂಕಾ ಈ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ 11 ಪಂದ್ಯಗಳನ್ನು ಆಡಿದೆ. ಕೇವಲ 4ರಲ್ಲಿ ಜಯ ಗಳಿಸಿದೆ.

►ಡಂಬುಲಾದಲ್ಲಿ ಕೊಹ್ಲಿ ಏಕದಿನ ಪ್ರವೇಶ

ಪ್ರಾಮುಖ್ಯವಾದ ವಿಚಾರವೆಂದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2008, ಆಗಸ್ಟ್ 18ರಂದು ಇದೇ ಕ್ರೀಡಾಂಗಣದಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ್ದರು. ಭಾರತ ಈ ಪಂದ್ಯದಲ್ಲಿ 46 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟಾಗಿತ್ತು . ಕೊಹ್ಲಿ ಮೊದಲ ಪಂದ್ಯದಲ್ಲಿ 12ರನ್ ಗಳಿಸಿ ಔಟಾಗಿದ್ದರು.

ಕೊಹ್ಲಿ ಒಂಬತ್ತು ವರ್ಷಗಳ ಬಳಿಕ ಇಲ್ಲಿಗೆ ವಿಶ್ವದ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಆಗಮಿಸಿದ್ದಾರೆ. ಟೀಮ್ ಇಂಡಿಯಾವನ್ನು ನಾಯಕರಾಗಿ ಮುನ್ನಡೆಸುತ್ತಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ 2015ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಗೆಲುವು ದಾಖಲಿಸಿತ್ತು. 2017ರಲ್ಲಿ ಮತ್ತೆ ಅವರು ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ರವಿವಾರ ನಡೆಯಲಿರುವ ಪಂದ್ಯದಲ್ಲಿ ಒಂದು ವೇಳೆ ಜಾಧವ್‌ರನ್ನು ತಂಡದಲ್ಲಿ ಸೇರಿಸಿಕೊಳ್ಳದಿದ್ದರೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಪಾರ್ಟ್ ಟೈಮ್ ಬೌಲರ್ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.

ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ತಂಡದ ವೇಗದ ಬೌಲಿಂಗ್ ದಾಳಿಯನ್ನು ಆರಂಭಿಸಲಿದ್ದಾರೆ. ಕುಲ್‌ದೀಪ್ ಯಾದವ್ ತಂಡದ ಪ್ರಮುಖ ಸ್ಪಿನ್ನರ್. ಎರಡನೆ ಸ್ಪಿನ್ನರ್ ಅವಕಾಶಕ್ಕಾಗಿ ಅಕ್ಷರ್ ಪಟೇಲ್ ಮತ್ತು ಯುಝ್ವೇಂದ್ರ ಚಾಹಲ್ ನಡುವೆ ಪೈಪೋಟಿ ಕಂಡು ಬಂದಿದೆ.

►ಲಂಕೆಗೆ 2 ಪಂದ್ಯಗಳಲ್ಲಿ ಗೆಲುವು ಅಗತ್ಯ

ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಇದೀಗ ಏಕದಿನ ಸರಣಿಯಲ್ಲಿ ಗೆಲ್ಲುವ ಪ್ರಯತ್ನ ನಡೆಸಲಿದೆ. 2019ರ ವಿಶ್ವಕಪ್‌ನಲ್ಲಿ ಯಾವುದೇ ಅಡತಡೆಯಿಲ್ಲದೆ ಅವಕಾಶ ದೃಢಪಡಿಸಲು ಇನ್ನೂ ಎರಡು ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ಗೆಲ್ಲಲೇಬೇಕಾಗಿದೆ. ಭಾರತದಲ್ಲಿ ಶ್ರೀಲಂಕಾ ವಿರುದ್ದ 2015 ನವೆಂಬರ್‌ನಲ್ಲಿ ಆಡಿದ ಸರಣಿಯಲ್ಲಿ ಭಾರತ 5-0 ಕ್ಲೀನ್ ಸ್ವೀಪ್ ಮಾಡಿತ್ತು. ಝಿಂಬಾಬ್ವೆ ವಿರುದ್ಧ ಶ್ರೀಲಂಕಾ ತವರಲ್ಲಿ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರಿಂದಾಗಿ ಆ್ಯಂಜೆಲೊ ಮ್ಯಾಥ್ಯೂಸ್ ನಾಯಕತ್ವವನ್ನು ಕಳೆದುಕೊಂಡಿದ್ದರು.

ಇದೀಗ ಉಪುಲ್ ತರಂಗ ಶ್ರೀಲಂಕಾ ತಂಡವನ್ನು ನಾಯಕರಾಗಿ ಏಕದಿನ ಸರಣಿಯಲ್ಲಿ ಮುನ್ನಡೆಸುತ್ತಿದ್ದಾರೆ.

ಪಂದ್ಯದ ಸಮಯ: ಅಪರಾಹ್ನ್ನ 2:30ಕ್ಕೆ ಆರಂಭ.

ಭಾರತ : ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಝ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಶಾರ್ದುಲ್ ಠಾಕೂರ್.

ಶ್ರೀಲಂಕಾ : ಉಪುಲ್ ತರಂಗ(ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಧನುಶ್ಕ ಗುಣತಿಲಕ, ಕುಶಾಲ್ ಮೆಂಡಿಸ್, ಚಾಮರಾ ಕಪುಗೆಡೆರಾ, ಮಿಲಿಂದಾ ಸಿರಿವಧರ್ನ, ಮಿಲಿಂದಾ ಪುಷ್ಪಕುಮಾರ, ಅಕಿಲಾ ಧನಂಜಯ್, ಲಕ್ಷಣ್ ಸಂಡಕನ್, ತಿಸ್ಸರಾ ಪೆರೆರಾ, ವಾನಿಂದು ಹಸಾರಂಗ, ಲಸಿತ್ ಮಾಲಿಂಗ, ದುಶ್ಮಂಥ, ಚಾಮೀರಾ, ವಿಶ್ವ ಫೆರ್ನಾಂಡೊ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News