×
Ad

ರಾಜ್ಯದಲ್ಲಿ ಬದಲಾವಣೆಗೆ ಆರ್ಯ ವೈಶ್ಯರ ಬೆಂಬಲ ಅಗತ್ಯ: ಕೇಂದ್ರ ಸಚಿವ ಅನಂತ್‌ಕುಮಾರ್

Update: 2017-08-20 18:26 IST

ಬೆಂಗಳೂರು, ಆ. 20: ದೇಶದ ಪ್ರಗತಿ ಹಾಗೂ ಬದಲಾವಣೆಗೆ ಆರ್ಯ ವೈಶ್ಯ ಸಮಾಜದ ಕೊಡುಗೆ ಅನನ್ಯ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಬದಲಾವಣೆ ತರಲು ಈ ಸಮಾಜದ ಬೆಂಬಲ ಅಗತ್ಯವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನದಲ್ಲಿ ಆಯೋಜಿಸಿದ್ದ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಶತಮಾನೋತ್ಸವ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ನೇತೃತ್ವದಲ್ಲಿ ದೇಶದಲ್ಲಿ ಬದಲಾವಣೆ ಅಲೆ ಶುರುವಾಗಿದೆ. ಆರ್ಯ ವೈಶ್ಯ ಸಮಾಜ ಆಶೀರ್ವಾದ ಮಾಡಿದರೆ ಕರ್ನಾಟಕದಲ್ಲೂ ಬದಲಾವಣೆ, ಉತ್ತಮ ಆಡಳಿತ ತರಬಹುದು. ಮುಂದಿನ ಚುನಾವಣೆಯಲ್ಲಿ ಆರ್ಯ ವೈಶ್ಯ ಸಮಾಜದ ಕೆಲ ಯುವ ನಾಯಕರಿಗೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಜೋಡಿ ದೇಶದಲ್ಲಿ ಅತ್ಯುತ್ತಮವಾದ ಸಮೃದ್ಧ ಆಡಳಿತವನ್ನು ಕೊಡಬೇಕು ಎನ್ನುವ ದೃಷ್ಟಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಉತ್ತಮ ಆಡಳಿತ ನೀಡುವುದು ಮಾತ್ರವಲ್ಲದೆ ವಿಶ್ವದಲ್ಲೇ ಭಾರತವನ್ನು ಮೊದಲನೆ ಸ್ಥಾನಕ್ಕೆ ತರಬೇಕು ಎನ್ನುವುದು ಪಕ್ಷದ ಅಶಯ ಎಂದರು.

ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ 2020ರ ವೇಳೆಗೆ ರಾಜ್ಯದ ಆರ್ಯ ವೈಶ್ಯ ಸಮಾಜದಲ್ಲಿ ಸಂಪೂರ್ಣ ಬಡತನ ನಿರ್ಮೂಲನೆ ಮಾಡಬೇಕು ಎನ್ನುವ ಗುರಿಯನ್ನು ಆರ್ಯ ವೈಶ್ಯ ಮಹಾಸಭಾ ಹೊಂದಿದೆ. ಸರಕಾರಗಳ ಬಳಿ ಹೋಗಿ ಕೈಚಾಚುವಂತಹ ಸಂದರ್ಭ ನಿರ್ಮಾಣವಾಗದೆ ಸಂಪೂರ್ಣ ಸ್ವಾಭಿಮಾನದ ಸಮಾಜ ನಿರ್ಮಾಣ ಮಾಡಬೇಕಿದೆ. ಸರಕಾರ ಇದಕ್ಕೆ ಸಹಕಾರ ನೀಡಬೇಕು. ಸಹಕಾರ ನೀಡದಿದ್ದರೂ ತೊಂದರೆಯಿಲ್ಲ ಆದರೆ ಕಾಲೆಳೆಯಬಾರದು ಎಂದು ಹೇಳಿದರು.

ಯಾವುದೇ ಉಪಜಾತಿಯಿಲ್ಲದ ಏಕೈಕ ಜಾತಿ ಇದ್ದರೆ ಅದು ಆರ್ಯ ವೈಶ್ಯ ಸಮಾಜ. ಸಣ್ಣ ಸಮಾಜವಾದರೂ ಸಂಘಟನೆ ಇರುವ ಸಮಾಜ ಎಂದು ರವಿಶಂಕರ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಜಿಎಂಆರ್ ಗ್ರೂಪ್‌ನ ಅಧ್ಯಕ್ಷ ಜಿ.ಎಂ. ರಾವ್, ಬ್ರಿಗೇಡ್ ಗ್ರೂಪ್ ಸಿಎಂಡಿ ಎಂ.ಆರ್.ಜೈಶಂಕರ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News