ಮೊದಲ ಟೆಸ್ಟ್: ಇಂಗ್ಲೆಂಡ್‌ಗೆ ಇನಿಂಗ್ಸ್, 209 ರನ್‌ಗಳ ಜಯ

Update: 2017-08-20 18:36 GMT

 ಬರ್ಮಿಂಗ್‌ಹ್ಯಾಮ್, ಆ.20: ಆತಿಥೇಯ ಇಂಗ್ಲೆಂಡ್ ತಂಡ ಇಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಇನಿಂಗ್ಸ್ ಹಾಗೂ 209 ರನ್‌ಗಳ ಭರ್ಜರಿ ಜಯ ಗಳಿಸಿದೆ.

  ಟೆಸ್ಟ್‌ನ ಮೂರನೆ ದಿನವಾಗಿರುವ ಶನಿವಾರ ವೆಸ್ಟ್‌ಇಂಡೀಸ್ ಎರಡನೆ ಇನಿಂಗ್ಸ್ ನಲ್ಲಿ 45.4 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟಾಗಿದೆ. ಐದು ದಿನಗಳ ಟೆಸ್ಟ್ ಪಂದ್ಯ ಮೂರೇ ದಿನಗಳಲ್ಲಿ ಮುಗಿದಿದೆ. ವಿಂಡೀಸ್ ಒಂದೇ ದಿನ 261 ರನ್‌ಗಳಿಗೆ 19 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

   ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 47 ಓವರ್‌ಗಳಲ್ಲಿ 168ರನ್‌ಗೆ ಆಲೌಟಾಗಿ ಫಾಲೋಆನ್‌ಗೆ ಒಳಗಾಗಿದ್ದ ವಿಂಡೀಸ್ ಎರಡನೆ ಇನಿಂಗ್ಸ್‌ನಲ್ಲೂ ಚೇತರಿಸಿಕೊಳ್ಳದೆ ಬೇಗನೆ ಆಲೌಟಾಗಿದೆ. ಇದರೊಂದಿಗೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸ್ಟುವರ್ಟ್ ಬ್ರಾಡ್(34ಕ್ಕೆ 3), ಜೇಮ್ಸ್ ಆ್ಯಂಡರ್ಸನ್(12ಕ್ಕೆ 2), ರೊಲ್ಯಾಂಡ್ ಜೋನ್ಸ್(18ಕ್ಕೆ 2), ಬೆನ್ ಸ್ಟೋಕ್ಸ್(9ಕ್ಕೆ 1) ಮತ್ತು ಮೊಯಿನ್ ಅಲಿ (54ಕ್ಕೆ 2) ಸಂಘಟಿತ ದಾಳಿಯ ಮುಂದೆ ವಿಂಡೀಸ್ ತತ್ತರಿಸಿದೆ.

ಸ್ಟುವರ್ಟ್ ಬ್ರಾಡ್ ಅವರು ಎರಡನೆ ಇನಿಂಗ್ಸ್‌ನಲ್ಲಿ 34ಕ್ಕೆ 3 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 47ಕ್ಕೆ 2 ವಿಕೆಟ್ ಪಡೆದಿದ್ದರು. ಇದರೊಂದಿಗೆ ಒಟ್ಟು 5 ವಿಕೆಟ್ ಪಡೆದು ಟೆಸ್ಟ್‌ನಲ್ಲಿ ಪಡೆದ ವಿಕೆಟ್‌ಗಳ ಸಂಖ್ಯೆಯನ್ನು 384ಕ್ಕೆ ಏರಿಸಿದ್ದಾರೆ. ಇಂಗ್ಲೆಂಡ್‌ನ ಗ್ರೇಟ್ ಇಯಾನ್ ಬೋಥಮ್ (383) ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಎರಡನೆ ಸ್ಥಾನ ಪಡೆದಿದ್ದಾರೆ.

 ಆರಂಭಿಕ ದಾಂಡಿಗ ಕ್ರೇಗ್ ಬ್ರಾಥ್‌ವೈಟ್ 40 ರನ್ ಗಳಿಸಿರುವುದು ವಿಂಡೀಸ್ ಪರ ದಾಖಲಾಗಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

ಕೀರನ್ ಪೋವೆಲ್(10), ಕೈಲ್ ಹೋಪ್(12), ರೋಸ್ಟನ್ ಚೇಸ್(24), ಜರ್ಮೈನ್ ಬ್ಲಾಕ್‌ವುಡ್(12), ಕೇಮಾರ್ ರೋಚ್(12) ಎರಡಂಕಿಯ ಕೊಡುಗೆ ನೀಡಿದರು. ಆದರೆ ನಾಯಕ ಜೇಸನ್ ಹೋಲ್ಡರ್(0) ಖಾತೆ ತೆರೆಯದೆ ನಿರ್ಗಮಿಸಿದರು.

 ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ದಾಂಡಿಗ ಅಲೆಸ್ಟೈರ್ ಕುಕ್ ದ್ವಿಶತಕ(243) ಮತ್ತು ನಾಯಕ ಜೋ ರೂಟ್ ಶತಕ(136)ಗಳ ನೆರವಿನಲ್ಲಿ 135.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 514 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 168 ರನ್‌ಗಳಿಗೆ ಆಲೌಟಾಗಿತ್ತು. ಜರ್ಮೈನ್ ಬ್ಲಾಕ್‌ವುಡ್ ಅಜೇಯ 79 ರನ್(75ಎ,9ಬೌ,2ಸಿ) ಗಳಿಸಿದ್ದರು. ಇದರೊಂದಿಗೆ ಇಂಗ್ಲೆಂಡ್ 346 ರನ್‌ಗಳ ಮುನ್ನಡೆ ಸಾಧಿಸಿ, ವೆಸ್ಟ್‌ಇಂಡೀಸ್‌ಗೆ ಫಾಲೋ ಆನ್ ಹೇರಿತ್ತು.

ಸಂಕ್ಷಿಪ್ತ ಸ್ಕೋರ್ ವಿವರ

►ಇಂಗ್ಲೆಂಡ್ ಮೊದಲ ಇನಿಂಗ್ಸ್ 514/8( ಡಿಕ್ಲೇರ್)

►ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್ 168

►ವೆಸ್ಟ್‌ಇಂಡೀಸ್ ಎರಡನೆ ಇನಿಂಗ್ಸ್ 45.4 ಓವರ್‌ಗಳಲ್ಲಿ ಆಲೌಟ್ 137( ಬ್ರಾಥ್‌ವೈಟ್ 40, ಚೇಸ್ 24; ಬ್ರಾಡ್ 34ಕ್ಕೆ 3).

ಪಂದ್ಯಶ್ರೇಷ್ಠ: ಅಲೆಸ್ಟೈರ್ ಕುಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News