ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕ್ಕೆ ಆಗ್ರಹ: ಆ.23ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ

Update: 2017-08-21 12:53 GMT

ಬೆಂಗಳೂರು, ಆ.21: ಶಿಕ್ಷಣ ಮಾರಾಟ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಆ.23 ರಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಕರ್ನಾಟಕ ವಿದ್ಯಾರ್ಥಿ ಪೋಷಕರ ಜಾಗೃತಿ ವೇದಿಕೆ ತೀರ್ಮಾನಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರವಿ, ಹಣ ಸುಲಿಗೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.16 ರಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೆ, ಇದುವರೆಗೂ ಸರಕಾರದ ಯಾವ ಅಧಿಕಾರಿಯೂ ಇಲ್ಲಿವರೆಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಡೆಗಟ್ಟಲು ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಕಮಿಟಿ ರಚಿಸಬೇಕು. ಆದರೆ, ಬಹುತೇಕ ರಾಜಕಾರಣಿಗಳ ಮಾಲಕತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿವೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಶಿಕ್ಷಣ ದಂಧೆಗೆ ಕಡಿವಾಣ ಹಾಕಲು ಸರಕಾರ ಮುಂದಾಗುತ್ತಿಲ್ಲ ಎಂದು ದೂರಿದರು.

ಸರಕಾರ ಹಾಗೂ ಅನುದಾನಿತ ಖಾಸಗಿ ಶಾಲೆಗಳ ಶೈಕ್ಷಣಿಕ ವರ್ಷವನ್ನು ಏಕಕಾಲಕ್ಕೆ ಪ್ರಾರಂಭಿಸಬೇಕು. ಸಹಕಾರಿ ಸಂಘಗಳ ಮೂಲಕ ಶಾಲಾ ಸಮವಸ್ತ್ರ, ಪಠ್ಯ ಪುಸ್ತಕ, ನೋಟ್ ಪುಸ್ತಕ ಹಾಗೂ ಇನ್ನಿತರೆ ಸಲಕರಣೆಗಳನ್ನು ಪೂರೈಸಬೇಕು. ಶಿಕ್ಷಣ ಇಲಾಖೆ ಆದೇಶದಂತೆ ಶಾಲೆಯ ಮುಖ್ಯಗೇಟ್‌ನ ಮುಂಭಾಗದಲ್ಲಿ ಸೂಚನಾ ಫಲಕ ಪ್ರಕಟಿಸಬೇಕು. ಪದೇ ಪದೇ ಶುಲ್ಕ ಹೆಚ್ಚಳ ಮಾಡುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಆ.23 ರಂದು ನಗರದ ಸ್ವಾತಂತ್ರ ಉದ್ಯಾನವನದಿಂದ ಮುಖ್ಯಮಂತ್ರಿ ಮನೆವರೆಗೂ ಸಾವಿರಾರು ಜನರು ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News