ಆ.27ರಿಂದ ನದಿ ಜೋಡಣೆಗೆ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ

Update: 2017-08-21 13:01 GMT

ಬೆಂಗಳೂರು, ಆ.21: ದೇಶದಲ್ಲಿ ಉತ್ತರದಿಂದ ದಕ್ಷಿಣಾಭಿಮುಖವಾಗಿ ಹರಿಯುತ್ತಿರುವ ಎಲ್ಲಾ ನದಿಗಳನ್ನು ಜೋಡಣೆ ಮಾಡಬೇಕು ಎಂದು ಆಗ್ರಹಿಸಿ ಆ.27 ಮತ್ತು 28 ರಂದು ನಗರದಲ್ಲಿ ಜಲ ಸಂಗಮಕ್ಕಾಗಿ ಹಕ್ಕೊತ್ತಾಯ ಸಮಿತಿ ವತಿಯಿಂದ ಸಹಿ ಸಂಗ್ರಹ ಚಳವಳಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕಿ ಯಮುನಾ, ವಿಭಿನ್ನ ಸಮತೋಲನದಲ್ಲಿರುವ ಭಾರತದಲ್ಲಿ ಕೆಲವು ಕಡೆಗಳಲ್ಲಿ ಅತಿಯಾದ ನೀರಿನಿಂದ ಪ್ರವಾಹವಾಗುತ್ತಿದೆ. ಮತ್ತೊಂದು ಕಡೆ ನೀರಿಲ್ಲದೆ, ಭೂಮಿ ಬರಡಾಗುತ್ತಿದೆ. ಹೀಗಾಗಿ, ಕೇಂದ್ರ ಸರಕಾರ ಗಂಗಾ ನದಿಯಿಂದ ಕಾವೇರಿವರೆಗೂ ಎಲ್ಲ ನದಿಗಳನ್ನು ಜೋಡಣೆ ಮಾಡಬೇಕು ಎಂದರು.

ಉತ್ತರ ಭಾರತದಲ್ಲಿ ಹರಿಯುವ ನದಿಗಳು ಬಹುತೇಕ ಹಿಮಾಲಯದ ಪರ್ವತ ಭಾಗದಲ್ಲಿ ಉದಯವಾಗಿ ಅಗತ್ಯ ಬಳಕೆಗೆ ಪೂರೈಕೆಯಾಗಿ ಉಳಿಕೆ ನೀರು ಸಮುದ್ರದ ಪಾಲಾಗುತ್ತಿದೆ. ಈ ನೀರನ್ನು ದಕ್ಷಿಣ ಭಾರತದ ಕಡೆಗೆ ತಿರುಗಿಸುವ ಯೋಜನೆ ಕೈಗೆತ್ತಿಕೊಂಡರೆ ಸುಮಾರು 15 ರಾಜ್ಯಗಳು ನೀರಿನ ಸಮಸ್ಯೆಯಿಂದ ಮುಕ್ತಿ ಪಡೆಯುತ್ತವೆ. ದೇಶದ 15 ಪ್ರಮುಖ ನದಿಗಳು ಈ ಯೋಜನೆ ಅಡಿಯಲ್ಲಿ ಅಭಿವೃದ್ಧಿಯಾಗುತ್ತವೆ ಎಂದು ಅವರು ಹೇಳಿದರು.

ಮಧ್ಯಪ್ರದೇಶ-ಉತ್ತರ ಪ್ರದೇಶ ನಡುವಿನ ನದಿ ಜೋಡಣೆ ಮಾಡಲಾಗಿದೆ. ಅದೇ ರೀತಿ ಆಂಧ್ರ ಪ್ರದೇಶದಲ್ಲಿ ನದಿ ಜೋಡಣೆ ಮಾಡಲಾಗುತ್ತಿದೆ. ಇದರ ಮಾದರಿ ಆಧರಿಸಿ ಕೇಂದ್ರ ಸರಕಾರ ದೇಶದಾದ್ಯಂತ ನದಿ ಜೋಡಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನದಿ ಜೋಡಣೆ ಮಾಡುವ ಕುರಿತು ಶೀಘ್ರವಾಗಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜು.14 ರಂದು ರಾಜ್ಯಾದ್ಯಂತ ಸಹಿ ಚಳವಳಿಗೆ ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಚಾಲನೆ ನೀಡಿದರು. ಅನಂತರ ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಸಹಿ ಸಂಗ್ರಹ ಮಾಡಲಾಗಿದೆ. ಸುಮಾರು 1 ಲಕ್ಷ ಸಹಿ ಸಂಗ್ರಹ ಮಾಡುವ ಮೂಲಕ ಅ.6 ರಂದು ಪ್ರಧಾನಿ ಮಂತ್ರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು ನಗರದಲ್ಲಿ ನಡೆಯಲಿರುವ ಸಹಿ ಸಂಗ್ರಹದಲ್ಲಿ ಭಾಗವಹಿಸಲಿಚ್ಛಿಸುವರು 99026 98623 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಯಮುನಾ ಈ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News