ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯಿಂದ ಅಪಘಾತಗಳ ಸಂಖ್ಯೆ ಇಳಿಕೆ: ಸಚಿವ ರಾಮಲಿಂಗಾ ರೆಡ್ಡಿ

Update: 2017-08-21 13:11 GMT

ಬೆಂಗಳೂರು, ಆ.21: ಕೇಂದ್ರ ಸರಕಾರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಇದು ಜಾರಿಯಾದರೆ ಅಪಘಾತಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಿಸಿದ್ದಾರೆ.

ಗೋಲ್ಡನ್ ಅವರ್ ಸಂಸ್ಥೆ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಾಮೂಹಿಕ ಗಾಯಾಳುಗಳ ಪರಿಹಾರ ವಾಹನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿಲ್ಲ. ಅಪಘಾತಗಳು ತಗ್ಗಬೇಕಾದರೆ ಈ ಕಾಯ್ದೆ ಜಾರಿಯಾಗಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಕಾನೂನು ಉಲ್ಲಂಘಿಸುವ ಪ್ರಕರಣಗಳಿಗೆ ದಂಡದ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಲಾಗಿದೆ. ಈಗ ಇರುವ ಕಾಯ್ದೆಯ ಪ್ರಕಾರ ಬೈಕ್ ಸವಾರ ಹೆಲ್ಮೆಟ್ ದರಿಸಿಲ್ಲದಿದ್ದರೆ ಕೇವಲ 100ರೂ.ದಂಡವಿದೆ. ಆದರೆ, ಹೊಸ ಕಾಯ್ದೆಯಲ್ಲಿ 1000ರೂ.ಕ್ಕೂ ಹೆಚ್ಚಿದೆ. ಹೀಗೆ ಪ್ರತಿ ಪ್ರಕರಣದಲ್ಲೂ ದಂಡವನ್ನು ಹೆಚ್ಚಳ ಮಾಡಲಾಗಿದೆ. ಹೀಗಾಗಿ ಹೊಸ ಕಾಯ್ದೆ ಜಾರಿದರೆ ವಾಹನ ಸವಾರರು ಕಾನೂನು ಉಲ್ಲಂಘಿಸುವುದನ್ನು ಕಡಿಮೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.


ಪ್ರತಿವರ್ಷ ದೇಶದಲ್ಲಿ ಸುಮಾರು 4ಲಕ್ಷ 50ಸಾವಿರ ಅಪಘಾತಗಳು ಸಂಭವಿಸುತ್ತವೆ. ಈ ಅಪಘಾತಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಗಾಯಗೊಳ್ಳುತ್ತಿದ್ದಾರೆ. ರಾಜ್ಯದಲ್ಲೂ ಪ್ರತಿವರ್ಷ 10ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಅಪಘಾತಗಳಲ್ಲಿ ಸಾವನಪ್ಪುವ ಬಹುತೇಕ ಮಂದಿ ಕುಟುಂಬದ ಮುಖ್ಯಸ್ಥರೇ ಆಗಿರುತ್ತಾರೆ. ಹೀಗಾಗಿ ಒಂದು ಅಪಘಾತದಿಂದ ಇಡೀ ಕುಟುಂಬವೇ ಅನಾಥವಾಗುವ ಸಂಭವವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಪಘಾತಕ್ಕೆ ಅಶಿಸ್ತು ಕಾರಣ: ದೇಶದಲ್ಲಿ ಮೋಟಾರ್ ವಾಹನ ಕಾಯ್ದೆಯ ಮೂಲಕ ವಾಹನಗಳ ಸುರಕ್ಷಿತ ಪ್ರಯಾಣಕ್ಕೆ ಹಲವು ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೆ, ಭಾರತದಲ್ಲಿ ವಾಹನ ಸವಾರರು ಶೇ.10ರಷ್ಟು ಪ್ರಮಾಣದ ನಿಯಮವನ್ನು ಪಾಲಿಸುವುದಿಲ್ಲ. ರಸ್ತೆಗಳಲ್ಲಿ ಅಶಿಸ್ತು ತಾಂಡವವಾಡುತ್ತಿದೆ. ಹೀಗಾಗಿ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ಅವರು ವಿಷಾಧಿಸಿದರು.

ಅಂಕಿಅಂಶದ ಪ್ರಕಾರ ದೇಶದಲ್ಲಿ ನಡೆಯುವ ಅಪಘಾತಗಳಲ್ಲಿ ಶೇ.78ರಷ್ಟು ಚಾಲಕರೇ ಹೊಣೆಗಾರರಾಗಿರುತ್ತಾರೆ. ಅದರಲ್ಲೂ 20ರಿಂದ 35ವರ್ಷದ ಒಳಗಿನ ಯುವಕರೇ ಅಪಘಾತಗಳಿಗೆ ಕಾರಣರಾಗಿದ್ದಾರೆ. ಹೀಗಾಗಿ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಕಠಿಣಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೆಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ಬ್ರೈನ್ ಸಂಸ್ಥೆಯ ಸ್ಥಾಪಕ ಡಾ.ಎನ್.ಕೆ.ವೆಂಕಟರಮಣ ಉಪಸ್ಥಿತರಿದ್ದರು.


ಅಪಘಾತಗಳಾಗುವ ಸ್ಥಳದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿಯೇ ಅಗತ್ಯವಾದ ಶಸ್ತ್ರಚಿಕಿತ್ಸೆ ನೀಡುವಂತಹ ಸಂಚಾರಿ ಅಂಬುಲೆನ್ಸ್ ಬಸ್‌ನ್ನು ಗೋಲ್ಡನ್ ಅವರ್ ಸಂಸ್ಥೆಗೆ ಕೆಎಸ್ಸಾರ್ಟಿಸಿ ವತಿಯಿಂದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಂಬುಲೆನ್ಸ್ ಬಸ್‌ಗಳ ಬೇಡಿಕೆ ಬಂದರೆ ಒದಗಿಸಲಾಗುವುದು.

ರಾಮಲಿಂಗಾ ರೆಡ್ಡಿ,  ರಾಜ್ಯ ಸಾರಿಗೆ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News