'ಸೆಪ್ಟೆಂಬರ್‌ನಲ್ಲಿ ಕೆಎಎಸ್ ನೇಮಕಾತಿ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟ'

Update: 2017-08-21 13:16 GMT

ಬೆಂಗಳೂರು, ಆ.21: ಕರ್ನಾಟಕ ಲೋಕಸೇವಾ ಆಯೊಗವು ರವಿವಾರ ರಾಜ್ಯಾದ್ಯಂತ ಗೆಜೆಟೆಡ್ ಪ್ರೊಬೇಷನರಿ -2015ರ ಹುದ್ದೆಗಳ ಮುಖ್ಯ ಪರೀಕ್ಷೆಗೆ ಪೂರಕವಾಗಿ ನಡೆಸಿರುವ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಾಗುತ್ತದೆ. ರವಿವಾರ ನಡೆದ ಪರೀಕ್ಷೆಯಲ್ಲಿ ವಿಶೇಷ ಒಎಂಆರ್ ಪ್ರತಿ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ 15-17 ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಸೋಮವಾರ(ಆ.21) ಸಂಜೆಯೊಳಗೆ ಪರೀಕ್ಷಾ ಮಾದರಿ ಉತ್ತರ ಪ್ರತಿ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆಯಾದ ಕೂಡಲೇ ಪರಿಶೀಲನೆ ನಡೆಸಿ, ವೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಆಕ್ಷೇಪಣೆ ಸ್ವೀಕರಿಸುವ ವೇಳೆ ಎಲ್ಲ ಉತ್ತರ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಾಜರಾತಿ ಇಳಿಕೆ: ರವಿವಾರ ರಾಜ್ಯದ 247 ಪರೀಕ್ಷಾ ಕೇಂದ್ರಗಳಲ್ಲಿ ಎರಡು ಪತ್ರಿಕೆಗಳಿಗೆ ನಡೆದ ಪರೀಕ್ಷೆಗೆ 2.31 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಹರಾಗಿದ್ದು, ಮೊದಲ ಪತ್ರಿಕೆಗೆ 1 ಲಕ್ಷ 33 ಸಾವಿರದ 291 ಹಾಗೂ ಎರಡನೇ ಪತ್ರಿಕೆಗೆ 1 ಲಕ್ಷ 31 ಸಾವಿರದ 123 ಅಭ್ಯರ್ಥಿಗಳು ಹಾಜರಾಗಿದ್ದರು. ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವುದು ಅಭ್ಯರ್ಥಿಗಳ ಹಾಜರಾತಿ ಕುಸಿತಕ್ಕೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಬರೆಯಲು ಬಳಸಿದ ವಿಶೇಷ ಒಎಂಆರ್‌ನ ಪ್ರತಿಯೊಂದು ಪ್ರತಿಗೆ 3.50 ರೂ. ಖರ್ಚು ಮಾಡಿ, ಪ್ರತಿಯೊಬ್ಬ ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ ಸೇರಿ ಇತರ ಮಾಹಿತಿಯನ್ನು ಮೊದಲೇ ಒಎಂಆರ್ ಪ್ರತಿಯಲ್ಲಿ ಕೊಡಿಂಗ್ ಮಾಡಿ ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಗೈರು ಹಾಜರಾದ ಅಭ್ಯರ್ಥಿಗಳ ಸುಮಾರು 2 ಲಕ್ಷ ಪ್ರತಿಗಳನ್ನು ಉಪಯೋಗಿಸಿಲ್ಲ. ಇದರಿಂದ ಕೆಪಿಎಸ್‌ಸಿಗೆ ಸುಮಾರು 7 ಲಕ್ಷ ರೂ. ವ್ಯರ್ಥವಾಗಿದೆ.

ಈ ಹೊಸ ವ್ಯವಸ್ಥೆಯಿಂದ ಮೌಲ್ಯಮಾಪನ ಹಾಗೂ ಅಂಕ ಎಣಿಕೆ ಸುಲಭವಾಗಲಿದೆ. ಇದರಿಂದ ಉತ್ತರ ಪ್ರತಿ ಪ್ರಕಟಿಸಿದ 15-17 ದಿನಗಳಲ್ಲಿ ಫಲಿತಾಂಶವನ್ನು ಕಡ್ಡಾಯವಾಗಿ ನೀಡಲಾಗುತ್ತದೆ. ಹಾಗೂ ನವೆಂಬರ್ ಒಳಗೆ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News