ಸಿಐಡಿ ತನಿಖೆಗೆ ಆದೇಶಿಸಿದ್ದ ಸದಾನಂದಗೌಡ: ವಿ.ಎಸ್.ಉಗ್ರಪ್ಪ

Update: 2017-08-21 13:44 GMT

ಬೆಂಗಳೂರು, ಆ.21:ಶಿವರಾಮಕಾರಂತ ಬಡಾವಣೆಯ 257 ಎಕರೆ 19 ಗುಂಟೆ ಜಮೀನಿನ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ 2012ರಲ್ಲಿ ಆದೇಶ ನೀಡಿದ್ದು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೇಷನ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್ ಅನ್ನು ಸಮರ್ಥಿಸಿಕೊಂಡರು.
ರಾಜ್ಯ ಸರಕಾರ ಯಡಿಯೂರಪ್ಪ ವಿರುದ್ಧ ದ್ವೇಷ ರಾಜಕಾರಣ ಮಾಡಿಲ್ಲ. ಡಾ.ಡಿ.ಅಯ್ಯಪ್ಪ ಎಂಬವರು ಜೂನ್ 8ರಂದು ಎಸಿಬಿಗೆ ದೂರು ನೀಡಿದ್ದು, ಸಾಕ್ಷ್ಯಾ ಧಾರಗಳನ್ನು ಸಂಗ್ರಹಿಸಿದ ಬಳಿಕ ಆಗಸ್ಟ್ 10ರಂದು ಎಫ್‌ಐಆರ್ ದಾಖಲಾಗಿದೆ. ತರಾತುರಿಯಲ್ಲಿ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲು ಮಾಡಿಲ್ಲ ಎಂದು ಹೇಳಿದರು.

ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಜನಬೆಂಬಲದಿಂದಾಗಿ ಬಿಜೆಪಿಯ ಮುಖಂಡರು ಹತಾಶರಾಗಿದ್ದಾರೆ. ಎಸಿಬಿ ದಾಖಲಿಸಿರುವ ಎಫ್‌ಐಆರ್ ದ್ವೇಷದ ರಾಜಕಾರಣ ಎನ್ನುವುದಾದರೆ, ಸಿಐಡಿ ತನಿಖೆಗೆ ಆದೇಶಿಸಿದ್ದ ಸದಾನಂದಗೌಡ ಅಂದು ದ್ವೇಷದ ರಾಜಕಾರಣ ಮಾಡಿದ್ದರೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ಶಿವರಾಮಕಾರಂತ ಬಡಾವಣೆಯ 257 ಎಕರೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಭಾಗಿಯಾಗಿರುವವರೆಲ್ಲ ಶ್ರೀಕೃಷ್ಣನ ಜನ್ಮಸ್ಥಾನ(ಜೈಲು)ಕ್ಕೆ ಸೇರುವುದು ನಿಶ್ಚಿತ. ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವಂತೆ ಅಧಿಕಾರಿ ಬಸವರಾಜೇಂದ್ರ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ತಿಪಟೂರಿನ ಸಹಾಯಕ ಆಯುಕ್ತರಾಗಿದ್ದಾಗ ಅವರು ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ತುರುವೇಕೆರೆ ಮ್ಯಾಜಿಸ್ಟ್ರೇಟ್ ಎದುರು ಏನು ಪ್ರಮಾಣಪತ್ರ ಸಲ್ಲಿಕೆಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳು ನೋಡಬೇಕು ಎಂದು ಅವರು ಹೇಳಿದರು.

ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮಾಡಬಾರದ ತಪ್ಪುಗಳನ್ನು ಮಾಡಿ, ಚೆಕ್ ಮೂಲಕ ಲಂಚ ಪಡೆದು ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದರು. ಈಗ ಏನೇ ತಿಪ್ಪರಲಾಗ ಹಾಕಿದರೂ ಜನತಾ ನ್ಯಾಯಾಲಯದಲ್ಲಿ ಅವರ ಪರವಾಗಿ ತೀರ್ಪು ಬರುವುದಿಲ್ಲ ಎಂದು  ತಿಳಿಸಿದರು.

ಕೇಂದ್ರದ ನರೇಂದ್ರಮೋದಿ ಸರಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಮೂವರು ಮುಖ್ಯಮಂತ್ರಿಗಳ ಕೊಡುಗೆ ಶೂನ್ಯ. ಕೇವಲ ಲೂಟಿ ಹೊಡೆದದ್ದು ಅಷ್ಟೇ ಸಾಧನೆ. ಅವರ ಗಿಮಿಕ್‌ಗಳಿಗೆ ರಾಜ್ಯದ ಮತದಾರರು ಮರಳಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುವುದಾಗಿ ಯಡಿಯೂರಪ್ಪ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ, ರಾಜ್ಯದಿಂದ ಬಿಜೆಪಿಯನ್ನು ಕಿತ್ತೊಗೆಯುವುದೆ ನನ್ನ ಗುರಿ ಎಂದಿದ್ದರು. ಈಗ ಅವರು ಎಲ್ಲಿದ್ದಾರೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ಅಪರಾಧವನ್ನು ಮುಚ್ಚಿಡುವುದು ಅಪರಾಧವಾಗುತ್ತದೆ. ಮುಖ್ಯಮಂತ್ರಿ ಯಾವುದಾದರೂ ಅಪರಾಧ ಮಾಡಿದ್ದರೆ, ಆ ಬಗ್ಗೆ ಯಡಿಯೂರಪ್ಪ ಬಳಿ ದಾಖಲೆಗಳಿದ್ದರೆ ಸಮಯ ವ್ಯರ್ಥ ಮಾಡದೆ ಪ್ರಕರಣ ದಾಖಲು ಮಾಡಲಿ ಎಂದು ಆಗ್ರಹಿಸಿದ ಅವರು, ಯಡಿಯೂರಪ್ಪ ನೀಡುವ ಉಡಾಫೆಯ ಮಾತುಗಳಿಗೆ ಯಾರೂ ತಲೆಕೆಡಿಸಿ ಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯ ಸರಕಾರ ಯಡಿಯೂರಪ್ಪ ವಿರುದ್ಧ ದ್ವೇಷ ರಾಜಕಾರಣ ಮಾಡಿಲ್ಲ. ಡಾ.ಡಿ.ಅಯ್ಯಪ್ಪ ಎಂಬವರು ಜೂನ್ 8ರಂದು ಎಸಿಬಿಗೆ ದೂರು ನೀಡಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕ ಆಗಸ್ಟ್ 10ರಂದು ಎಫ್‌ಐಆರ್ ದಾಖಲಾಗಿದೆ. ತರಾತುರಿಯಲ್ಲಿ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲು ಮಾಡಿಲ್ಲ. 

ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ ಸದಸ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News