ಉಚಿತ ಸಂಚಾರಿ ಆ್ಯಂಬುಲೆನ್ಸ್ ಬಸ್‌ಗೆ ಚಾಲನೆ

Update: 2017-08-21 13:57 GMT

ಬೆಂಗಳೂರು, ಆ.21: ರಸ್ತೆ ಮಧ್ಯೆದಲ್ಲಿ ಗಂಭೀರವಾದ ಅಪಘಾತಕ್ಕೆ ತುತ್ತಾದ ವ್ಯಕ್ತಿಗೆ 30ನಿಮಿಷ ಇಲ್ಲವೆ ಒಂದು ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಿದರೆ ರೋಗಿ ಗುಣಮುಖವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಗೋಲ್ಡನ್ ಅವರ್ ಸಂಸ್ಥೆ ಅಪಘಾತವಾಗುವ ಸ್ಥಳದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿಯೇ ಅಪಾಯದಿಂದ ಪಾರಾಗುವಂತಹ ಶಸ್ತ್ರಚಿಕಿತ್ಸೆಯನ್ನು ನೀಡುವಂತಹ ಆ್ಯಂಬುಲೆನ್ಸ್ ಬಸ್‌ಗೆ ಚಾಲನೆ ನೀಡಿದೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳು ನೂರಾರು ಸಂಖ್ಯೆಯಲ್ಲಿದೆ. ಆದರೆ, ಅಪಘಾತಕ್ಕೆ ತುತ್ತಾದ ವ್ಯಕ್ತಿಗೆ ಬಹುತೇಕ ಸಂದರ್ಭಗಳಲ್ಲಿ ಯಾವ ಅತ್ಯಾಧುನಿಕ ಉಪಕರಣಗಕು ಉಪಯೋಗಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಬೆಂಗಳೂರು ನಗರದಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿ ಮಾರ್ಗ ಮಧ್ಯೆದಲ್ಲಿಯೇ ಅಸುನೀಗುವ ಪ್ರಕರಣಗಳೇ ಹೆಚ್ಚಿವೆ.

ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಗೋಲ್ಡನ್ ಅವರ್ ಎಂಬ ಸಂಸ್ಥೆಯು ತುರ್ತು ಚಿಕಿತ್ಸಾ ಸಂಚಾರಿ ಅಂಬ್ಯುಲೆನ್ಸ್ ಬಸ್‌ಗೆ ಚಾಲನೆ ನೀಡಿದೆ. ಈ ಬಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳಲ್ಲಿರುವ ತುರ್ತು ಶಸ್ತ್ರ ಚಿಕಿತ್ಸಾ ಘಟಕದ ಮಾದರಿಯಲ್ಲಿ ಸಿದ್ಧತೆ ಮಾಡಲಾಗಿದೆ. ಎಂತಹದ್ದೆ ಗಂಭೀರ ಅಪಘಾತಗಳಿಗೂ ಸೂಕ್ತವಾದ ಚಿಕಿತ್ಸೆ ನೀಡವಂತಹ ಎಲ್ಲ ರೀತಿಯ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.

ಆಂಬ್ಯುಲೆನ್ಸ್ ಬಸ್‌ನಲ್ಲಿ ಅಗತ್ಯವಾದ ಸ್ಟ್ರೇಚರ್‌ಗಳು, ಆಮ್ಲಜನಕ ಮತ್ತು ಆರೋಗ್ಯದಲ್ಲಾಗುವ ಏರುಪೇರುಗಳ ಮೇಲೆ ನಿಗಾ ಇಡುವ ಉಪಕರಣ, ತುರ್ತು ಔಷಧಿ ಹಾಗೂ ಪ್ರಥಮ ಚಿಕಿತ್ಸೆ ನೀಡುವ ಮೂಲಕ ರೋಗಿಯ ಉಸಿರಾಟಕ್ಕೆ ಮತ್ತು ರಕ್ತ ಪರಿಚಲನೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಕ್ತವಾದ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿರುತ್ತದೆ.
  
ಏಕಕಾಲದಲ್ಲಿ 20ಮಂದಿಗೆ ಚಿಕಿತ್ಸೆ: ತುರ್ತು ಚಿಕಿತ್ಸಾ ಸಂಚಾರ ಆ್ಯಂಬುಲೆನ್ಸ್ ಬಸ್‌ನಲ್ಲಿ ತೀವ್ರವಾಗಿ ಗಾಯಗೊಂಡಿರುವ 8ರಿಂದ 10ಮಂದಿಗೆ ಹಾಗೂ ಸಾಧಾರಣ ಗಾಯಗೊಂಡಿರುವ 10ಮಂದಿಗೆ ಏಕಕಾಲದಲ್ಲಿ ಚಿಕಿತ್ಸೆ ಹಾಗೂ ಸಮೀಪದ ಆಸ್ಪತ್ರೆಗೆ ಸಾಗಿಸುವಂತಹ ವ್ಯವಸ್ಥೆಯಿದೆ. ಈ ತುರ್ತು ಚಿಕಿತ್ಸಾ ಸಂಚಾರಿ ಆ್ಯಂಬುಲೆನ್ಸ್ ಬಸ್ ದೊಡ್ಡ ಮಟ್ಟದ ಅಪಘಾತದ ಸಂದರ್ಭಗಳಲ್ಲಿ ಹೆಚ್ಚಿನ ನೆರವಿಗೆ ಬರುತ್ತದೆ. ಕಟ್ಟಡಳಿಗೆ ಬೆಂಕಿ ಬಿದ್ದಾಗ, ಸರಣಿ ಅಪಘಾತ ಸೇರಿದಂತೆ ಪ್ರವಾಹ ಹಾಗೂ ಭೂಕಂಪದಂತಹ ಅವಘಡಗಳಲ್ಲಿ ಈ ಆ್ಯಂಬುಲೆನ್ಸ್ ಬಸ್ ಹೆಚ್ಚಿನ ಉಪಯೊಗಕ್ಕೆ ಬರುತ್ತದೆ ಎಂದು ಗೋಲ್ಡನ್ ಅವರ್ ಸಂಸ್ಥೆಯ ಸಂಸ್ಥಾಪಕ ಡಾ.ಎನ್.ಕೆ.ವೆಂಕಟರಮಣ ಮಾಹಿತಿ ನೀಡಿದರು.


ಉಚಿತ ಸಂಚಾರಿ ಆ್ಯಂಬುಲೆನ್ಸ್ ಬಸ್‌ಗೆ 1062 ಕರೆ ಮಾಡಿ
 ದೇಶದಲ್ಲಿ ಇದೇ ಮೊದಲ ಬಾರಿಗೆ ತುರ್ತು ಚಿಕಿತ್ಸೆ ಸಂಚಾರಿ ಬಸ್‌ನ್ನು ಬೆಂಗಳೂರು ನಗರದಲ್ಲಿ ಚಾಲನೆ ನೀಡಲಾಗುತ್ತಿದೆ. ನಗರದ 20ಕಡೆ ಗೋಲ್ಡನ್ ಅವರ್ ಬ್ರಾಂಚ್‌ಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಸಂದರ್ಭದಲ್ಲಿ ಅಪಘಾತಗಳು, ಬೆಂಕಿ ಅವಘಡ ಸೇರಿದಂತೆ ಪ್ರಾಣಕ್ಕೆ ಹಾನಿಯಾಗುವಂತಹ ಯಾವುದೇ ರೀತಿಯ ಘಟನೆಗಳು ಸಂಭವಿಸಿದರು ಸಂಸ್ಥೆಯ ದೂ.1062 ಹಾಗೂ 9148080000ಗೆ ಕರೆ ಮಾಡಿ ಉಚಿತ ಸೇವೆಯನ್ನು ಪಡೆಯಬಹುದು.
-ಡಾ.ಎನ್.ಕೆ.ವೆಂಕಟರಮಣ ಸಂಸ್ಥಾಪಕ, ಗೋಲ್ಡನ್ ಅವರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News