ಒತ್ತುವರಿ ಸಾಬೀತಾದರೆ ಸ್ವಯಂಪ್ರೇರಿತ ದೂರು: ಪ್ರಶಾಂತ್ ಕುಮಾರ್ ಠಾಕೂರ್
ಬೆಂಗಳೂರು, ಆ.21: ರಾಜಕಾಲುವೆ ಒತ್ತುವರಿ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಎಸ್ಪಿ ಲಕ್ಷ್ಮಿಗಣೇಶ್ ನೇತೃತ್ವದಲ್ಲಿ ಬಿಎಂಟಿಎಫ್ ತಂಡವನ್ನು ರಚನೆ ಮಾಡಲಾಗಿದೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ನಗರದ ಹಲವು ವಾರ್ಡ್‌ಗಳ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿ ಫಜೀತಿ ಸೃಷ್ಟಿಸಿತ್ತು. ಈ ಅವಾಂತರಕ್ಕೆ ರಾಜಕಾಲುವೆ ಒತ್ತುವರಿ ಕಾರಣವೆಂದು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಿಎಂಟಿಎಫ್ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಇಂದಿನಿಂದಲೇ ಪರಿಶೀಲನೆ: ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದ ನಗರದ ಜೆಪಿನಗರ, ಕೋರಮಂಗಲ, ಬಿಟಿಎಂ ಲೇಔಟ್, ಮಹದೇವಪುರ, ಶಾಂತಿನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿರುವ ರಾಜಕಾಲುವೆಗಳನ್ನು ಕೂಲಂಕಶವಾಗಿ ಪರಿಶೀಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸ್ವಯಂ ಪ್ರೇರಿತ ದೂರು ದಾಖಲು: ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಬಿಎಂಟಿಎಫ್ ತಂಡವು ಅತ್ಯಂತ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಪರಿಶೀಲನೆ ಸಂದರ್ಭದಲ್ಲಿ ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾದರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.