ಕರ್ತವ್ಯಲೋಪ: ಇಂದಿರಾ ಕ್ಯಾಂಟೀನ್ ಪರಿವೀಕ್ಷಕ ಮೂರ್ತಿ ಅಮಾನತು
ಬೆಂಗಳೂರು, ಆ.21: ಉಪಾಹಾರ ವಿತರಿಸದೆಯೇ ಕರ್ತವ್ಯಲೋಪ ಎಸಗಿದ್ದ ಸುಬ್ರಮಣ್ಯ ನಗರ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನ ಹಿರಿಯ ಆರೋಗ್ಯ ಪರಿವೀಕ್ಷಕರೊಬ್ಬರನ್ನು ಅಮಾನತುಗೊಳಿಸುವಂತೆ ಮೇಯರ್ ಜಿ.ಪದ್ಮಾವತಿ ಆಯುಕ್ತರಿಗೆ ಆದೇಶ ನೀಡಿದ್ದಾರೆ.
ನಗರದ ಬಹುತೇಕ ಕ್ಯಾಂಟೀನ್‌ಗಳಲ್ಲಿ ಸಮರ್ಪಕವಾದ ಉಪಾಹಾರ ವಿತರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಿಢೀರನೆ ಇಲ್ಲಿನ ಕ್ಯಾಂಟೀನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕ್ಯಾಂಟೀನ್ ಉಸ್ತುವಾರಿ ವಹಿಸಿದ್ದ ಮೂರ್ತಿ ಉಪಾಹಾರ ವಿತರಿಸದೇ ‘ಕ್ಯಾಂಟೀನ್ ಮುಚ್ಚಿದೆ’ ಎಂದು ನಾಮಫಲಕ ಹಾಕಲಾಗಿತ್ತು. ಇದನ್ನು ಕಂಡು ಮೇಯರ್ ಪರಿವೀಕ್ಷಕರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಕ್ಯಾಂಟೀನ್‌ನಲ್ಲಿ ಕುಡಿಯುವ ನೀರಿಲ್ಲದೇ ಇದ್ದುದರಿಂದ ಉಪಾಹಾರವನ್ನು ಪೂರೈಕೆ ಮಾಡುತ್ತಿಲ್ಲ ಎಂದು ಮೇಯರ್‌ಗೆ ಮನವೊಲಿಸುವ ಪ್ರಯತ್ನ ಮಾಡಿದ ಮೂರ್ತಿ, ಆಕ್ರೋಶಗೊಂಡ ಮೇಯರ್, ಕೂಡಲೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಅಲ್ಲದೆ, ಜಾರ್ಜ್ ಸೂಚನೆಯಂತೆ ಪರಿವೀಕ್ಷಕ ಮೂರ್ತಿಯನ್ನು ಅಮಾನತು ಮಾಡುವಂತೆ ಆದೇಶಿಸಿದರು.
ಪ್ರಕಾಶ ನಗರ ಸೇರಿದಂತೆ ಇತರೆ ನಾಲ್ಕು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪರಿಶೀಲನೆ ದಿಢೀರ್ ಭೇಟಿ ನೀಡಿ ಅಲ್ಲಿ ವಿತರಿಸುತ್ತಿದ್ದ ಉಪಾಹಾರ ಹಾಗೂ ಇನ್ನಿತರೆ ವಿವಿಧ ಸೌಲಭ್ಯಗಳ ಬಗ್ಗೆ ಸಿಬ್ಬಂದಿ ಮತ್ತು ಗ್ರಾಹಕರಿಂದ ಮಾಹಿತಿ ಪಡೆದುಕೊಂಡರು. ನಂತರ ಮಾದನಾಯಕನಹಳ್ಳಿ ಮತ್ತು ಅರಮನೆ ಮೈದಾನದ ವೈಟ್ ಪೆಟೆಲ್ಸ್‌ನ ಅಡುಗೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.