×
Ad

ರಾಜ್ಯ ಸರಕಾರದಿಂದ 175 ಕೋಟಿ ರೂ.ಬಿಡುಗಡೆ: ಸಚಿವ ಎ.ಮಂಜು

Update: 2017-08-21 22:11 IST

 ಬೆಂಗಳೂರು, ಆ. 21: ದಕ್ಷಿಣ ಭಾರತದ ಜೈನರ ಕಾಶಿ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಮಹಾಮಸ್ತಕಾಭಿಷೇಕ 2018ರ ಫೆಬ್ರವರಿ 7ರಿಂದ 25ರ ವರೆಗೆ ನಡೆಯಲಿದ್ದು, ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 175 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕಕ್ಕೆ ದೇಶ, ವಿದೇಶಗಳಿಂದ ಸುಮಾರು 30ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಅಟ್ಟಣಿಗೆ: ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಅಟ್ಟಣಿಗೆಯನ್ನು ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ನಿರ್ಮಿಸಲು ಸಭೆಯಲ್ಲಿ ತೀರ್ಮಾನಿಸಿದ್ದು, ಈ ಕಾರ್ಯಕ್ಕೆ 12 ಕೋಟಿ ರೂ.ವೆಚ್ಚವಾಗಲಿದೆ. ಅಲ್ಲದೆ, ಶ್ರವಣಬೆಳಗೊಳದ ಸುತ್ತಲೂ ಯಾತ್ರಾರ್ಥಿಗಳು ತಂಗಲು ಅನುಕೂಲವಾಗುವಂತೆ 75 ಕೋಟಿ ರೂ. ಅಂದಾಜು ವೆಚ್ಚದಲ್ಲಿ 12 ಉಪನಗರವನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

30ರಿಂದ 35 ಲಕ್ಷ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಒಟ್ಟು 489 ಎಕರೆ ಪ್ರದೇಶದಲ್ಲಿ 12 ಉಪನಗರಗಳನ್ನು ನಿರ್ಮಿಸಲಾಗುವುದು. ಸುಮಾರು 25ರಿಂದ 30 ಸಾವಿರ ಮಂದಿ ತಂಗಲು ಉಪನಗರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು, ಮಹಾಮಸ್ತಕಾಭಿಷೇಕದ ಅಂಗವಾಗಿ ಅಲ್ಲಿರುವ ಕಲ್ಯಾಣಿಯನ್ನು ಶುದ್ಧೀಕರಣ ಮಾಡುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಶ್ರವಣಬೆಳಗೊಳದಲ್ಲಿನ ಹಾಗೂ ಸುತ್ತಮುತ್ತಲಿನ ರಸ್ತೆ ದುರಸ್ತಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಈ ಭಾರಿಯ ಮಹಾಮಸ್ತಕಾಭಿಷೇಕವು ಯಶಸ್ವಿಯಾಗುವಂತೆ ಈಗಾಗಲೇ ಉಪ ಸಮಿತಿಗಳನ್ನು ರಚಿಸಿ ಕೆಲಸ ಪ್ರಾರಂಭಿಸಲಾಗಿದೆ ಎಂದರು.


ಪ್ರಧಾನಿಗೆ ಆಹ್ವಾನ: ಮಹಾ ಮಸ್ತಕಾಭಿಷೇಕಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸೇರಿ ಇನ್ನಿತರ ಗಣ್ಯರನ್ನು ಆಹ್ವಾನಿಸಲಾಗುವುದು. ಈ ಸಂದರ್ಭದಲ್ಲಿ ಕೇಂದ್ರದಿಂದ ಈ ಕಾರ್ಯಕ್ರಮಕ್ಕೆ ಅನುದಾನ ನೀಡುವಂತೆ ಕೋರಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಹಾಜರಿದ್ದರು.


ಕೇಂದ್ರದಿಂದ ಬಿಡಿಗಾಸು ನೆರವಿಲ್ಲ:
‘ಉತ್ತರ ಪ್ರದೇಶ ಕುಂಬ ಮೇಳಕ್ಕೆ ಹೆಚ್ಚಿನ ಅನುದಾನ ನೀಡುವ ಕೇಂದ್ರ ಸರಕಾರ ಅಂತಾರಾಷ್ಟ್ರೀಯ ಮಟ್ಟದ ಶ್ರವಣಬೆಳಗೊಳದ ಬಾಹುಬಲಿ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮದ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ, ನಯಾ ಪೈಸೆ ಅನುದಾನವನ್ನು ನೀಡಿಲ್ಲ. 2006ರಲ್ಲಿ ನಡೆದ ಮಹಾ ಮಸ್ತಕಾಭಿಷೇಕಕ್ಕೆ ಕೇಂದ್ರ ಸರಕಾರ 90 ಕೋಟಿ ರೂ.ಹಣ ಬಿಡುಗಡೆ ಮಾಡಿತ್ತು’
-ಎ.ಮಂಜು, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News