ನಟ ಜಗ್ಗೇಶ್ ಪುತ್ರನ ಮೇಲಿನ ಹಲ್ಲೆ ಪ್ರಕರಣ: ಜಾಮೀನು ಕೋರಿ ಅರ್ಜಿ
ಬೆಂಗಳೂರು, ಆ.21: ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಆರೋಪಿ ಶಿವಶಂಕರ್ ಎಂಬವರು ನಿರೀಕ್ಷಣಾ ಜಾಮೀನು ಕೋರಿ ನಗರದ 68ನೆ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯಾದ ಶಿವಶಂಕರ್, ಹೆಬ್ಬಾಳದಲ್ಲಿ ವಾಸವಿದ್ದಾರೆ. ಆಗಸ್ಟ್ 14ರಂದು ಆರ್.ಟಿ.ನಗರದ ಮಠದಹಳ್ಳಿ ಬಳಿ ಗುರುರಾಜ್ ಅವರ ತೊಡೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಆ ಸಂಬಂಧ ಪ್ರಕರಣ ದಾಖಲಾದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ನೀಡಬಾರದು ಎಂದು ನಾವು ಸಹ ಆಕ್ಷೇಪಣೆ ಸಲ್ಲಿಸಿದ್ದೇವೆ. ಶೀಘ್ರವೇ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದರು.
ವಿಶೇಷ ತಂಡ ರಚನೆ: ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.
ಗುರುರಾಜ್ ಅವರ ಹೇಳಿಕೆಯಂತೆ ಪ್ರಕರಣ ದಾಖಲಿಸಿದ್ದೇವೆ. ಆರೋಪಿ ಶಿವಶಂಕರ್ ಅವರೇ ಈ ಕೃತ್ಯ ಎಸಗಿದ್ದು ಕಂಡುಬಂದಿದೆ. ಕೆಲ ರಾಜಕೀಯ ನಾಯಕರೊಂದಿಗೆ ಅವರು ಒಡನಾಟವಿಟ್ಟುಕೊಂಡಿದ್ದರು ಎಂಬುದು ಗೊತ್ತಾಗಿದೆ. ಅವರು ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.