200ನೆ ಪಂದ್ಯದಲ್ಲಿ ಶ್ರೀಲಂಕಾ ಅಭಿಮಾನಿಗಳ ಮನ ಗೆದ್ದ ಮಾಲಿಂಗ

Update: 2017-08-21 18:41 GMT

ಡಂಬುಲಾ, ಆ.21: ಭಾರತ ವಿರುದ್ಧ ರವಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಸುಲಭವಾಗಿ ಸೋಲುಂಡಿತ್ತು. 200ನೆ ಏಕದಿನ ಪಂದ್ಯವನ್ನಾಡಿದ್ದ ವೇಗದ ಬೌಲರ್ ಲಸಿತ್ ಮಾಲಿಂಗಗೆ ಈ ಪಂದ್ಯ ಕಹಿನೆನಪಾಗಿ ಉಳಿಯಿತು. ಮಾಲಿಂಗರ 200ನೆ ಪಂದ್ಯದಲ್ಲಿ ಸನ್ಮಾನ ಕಾರ್ಯಕ್ರಮವಿರಲಿಲ್ಲ. ಆದರೆ, ಮಾಲಿಂಗ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಮನಗೆಲ್ಲಲು ಯಶಸ್ವಿಯಾಗಿದ್ದಾರೆ. ಮಾಲಿಂಗ ತನ್ನ 200ನೆ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಲು ವಿಫಲರಾದರು. ಆದರೆ ಅವರು ಬೌಲಿಂಗ್ ಮಾಡಲು ಕಣಕ್ಕಿಳಿದಾಗ ನೆರೆದಿದ್ದ 14,000ಕ್ಕೂ ಅಧಿಕ ಅಭಿಮಾನಿಗಳು ‘ಮಾಲಿ, ಮಾಲಿ’ ಎಂದು ಕೂಗುತ್ತಾ ಹುರಿದುಂಬಿಸಿದರು. ಮಾಲಿಂಗ ಗುಂಗುರು ಕೂದಲನ್ನು ಹೋಲುವ ‘ವಿಗ್’ನ್ನು ಧರಿಸಿದ್ದ ಪುಟಾಣಿ ಅಭಿಮಾನಿಗಳು ತಮ್ಮ ಹೆತ್ತವರೊಂದಿಗೆ ಬಂದು ಮಾಲಿಂಗಗೆ ಬೆಂಬಲ ನೀಡಿದರು.

ರವಿವಾರ ಚೊಚ್ಚಲ ಪಂದ್ಯ ಆಡಿದ್ದ ವಿಶ್ವ ಫೆರ್ನಾಂಡೊ ಅವರೊಂದಿಗೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ದಾಳಿ ಆರಂಭಿಸಿದ್ದ ಮಾಲಿಂಗ ಯಾರ್ಕರ್ ಎಸೆತದಿಂದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಬೆದರಿಸಲು ಯತ್ನಿಸಿದರು. ಮಾಲಿಂಗ ಶತಕವೀರ ಶಿಖರ್ ಧವನ್ ವಿಕೆಟ್ ಪಡೆಯುವುದರಿಂದ ವಂಚಿತರಾದರು. ನಾಯಕ ಉಪುಲ್ ತರಂಗ ಕ್ಯಾಚ್ ಕೈ ಚೆಲ್ಲಿದ್ದ ಕಾರಣ ಮಾಲಿಂಗ ವಿಕೆಟ್ ವಂಚಿತರಾಗಿದ್ದರು. ರವಿವಾರ ವಿಕೆಟ್ ಪಡೆಯಲು ವಿಫಲರಾಗಿರುವ ಮಾಲಿಂಗ ಆ.24 ರಂದು ನಡೆಯಲಿರುವ ಎರಡನೆ ಪಂದ್ಯದಲ್ಲಿ ಇನ್ನೆರಡು ವಿಕೆಟ್‌ಗಳನ್ನು ಪಡೆದರೆ 300 ವಿಕೆಟ್ ಕ್ಲಬ್‌ಗೆ ಸೇರ್ಪಡೆೆಯಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News