ಅಮಿತ್ ಶಾ ಕುತಂತ್ರ ಕರ್ನಾಟಕದಲ್ಲಿ ನಡೆಯುವುದಿಲ್ಲ: ಡಾ.ಜಿ.ಪರಮೇಶ್ವರ್

Update: 2017-08-22 13:51 GMT

 ತುಮಕೂರು, ಆ.22: ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಚುನಾವಣೆ ಕಾರ್ಯತಂತ್ರ ರೂಪಿಸಿದರೆ ಅವರ ತಂತ್ರ-ಕುತಂತ್ರ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ 2016-17ನೆ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಪ್ರಾಂಗಣದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರಿಂದ ನಾವೇನು ಬುದ್ಧಿ ಕಲಿಯಬೇಕಿಲ್ಲ ನಮ್ಮಿಂದ ಅವರು ಕಲಿಯಬೇಕಾದ್ದದ್ದು ಸಾಕಷ್ಟಿದೆ. ರಾಜ್ಯ ಸರಕಾರ ಎಸಿಬಿಯನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಅವರ ವಿರುದ್ಧ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದು ಸತ್ಯಕ್ಕೆ ದೂರವಾದದು, ನಾವು ಯಾವುದೇ ರೀತಿಯಲ್ಲೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಸಾಕಷ್ಟು ಈಡೇರಿಸಲಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ರಾಜ್ಯಕ್ಕೆ ಕೊಟ್ಟಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಎಂದಿಗೂ ಮರೆಯುವುದಿಲ್ಲ ಎಂದ ಅವರು, ಸಿ4 ಸಮೀಕ್ಷೆಯನ್ನು ನಾವೇನು ದುಡ್ಡುಕೊಟ್ಟು ಮಾಡಿಸಿಲ್ಲ ಅಥವಾ ಮಾಡಿ ಎಂದು ಹೇಳಲಿಲ್ಲ. ವಾಸ್ತವತೆಯನ್ನು ಜನತೆಯ ಮುಂದಿಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಟಷ್ಟ ಬಹುಮತದೊಂದಿಗೆ ಸರಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.\

ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಸಿಎಲ್‍ಪಿ ಸಭೆ ತೀರ್ಮಾನ ಮಾಡಲಿದೆ. ಈ ವಿಚಾರವನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಜನರು ತಿಳಿಸುತ್ತಾರೋ ಅವರೇ ಆಗುತ್ತಾರೆ. ಮಾಜಿ ಸಚಿವ ಎಚ್.ವೈ.ಮೇಟಿ ಅವರ ಮೇಲಿನ ಸಿಐಡಿ ತನಿಖೆ ಮುಗಿದಿದ್ದು, ವರದಿ ಬರಬೇಕಿದೆ. ಮತ್ತೆ ಆ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಕೆಪಿಎಸ್‍ಸಿ ಸದಸ್ಯರ ನೇಮಕಾತಿಯಲ್ಲಿ ಸಣ್ಣಪುಟ್ಟ ಲೋಪದೋಷ ಉಂಟಾಗಿರುವುದು ನಿಜ. ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದ ಅವರು, ತುಮಕೂರು ಕಾಂಗ್ರೆಸ್‍ನಲ್ಲಿ ಯಾವುದೇ ಗೊಂದಲವಿಲ್ಲ. ನಾವು ಕಾಂಗ್ರೆಸ್‍ನಲ್ಲಿ ಮೂಲೆಗುಂಪು ಆಗಿಲ್ಲ. ಕಳೆದ ಶನಿವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಲು ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಮುದ್ದಹನುಮೇಗೌಡ, ಸಚಿವ ಟಿ.ಬಿ.ಜಯಚಂದ್ರ, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಗಂಗಾಧರಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News